ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧ್ದಿಗೆ ಹೆಚ್ಚಿನ ಆದ್ಯತೆ: ಗುಂಡೂರಾವ್
ಮಡಿಕೇರಿ, ಜೂ.7: ತಾಲೂಕಿನ ಚೆಟ್ಟಿಮಾನಿ-ಕಲ್ಲುಗುಂಡಿ-ದಬ್ಬಡ್ಕ ರಸ್ತೆಗೆ ಸಂಪರ್ಕ ಕಲ್ಪಿಸುವ ಹಾಗೂ ಪಯಸ್ವಿನಿ ನದಿ ಮಾರ್ಗ ಸುಮಾರು 1.27 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಮಂಗಳವಾರ ಉದ್ಘಾಟಿಸಿದರು. ನಂತರ ಚೆಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧ್ದಿಗೆ ಹೆಚ್ಚಿನ ಗಮನಹರಿಸಲಾಗಿದೆ. ಜಿಲ್ಲೆಯ ಗ್ರಾಮೀಣ ರಸ್ತೆಗಳಿಗೆ ಪೂರಕವಾಗಿ ಹೆಚ್ಚಿನ ಅನುದಾನ ಬಳಕೆಯಾಗುವಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂ.ನ ವಿಶೇಷ ಅನುದಾನವನ್ನು ನೀಡಲಾಗಿದ್ದು, ಇದರಲ್ಲಿ ಹೆಚ್ಚಿನ ಪಾಲು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಅದರಂತೆ ಜನರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ರಾಜ್ಯದಲ್ಲಿ ರಾಷ್ಟೀಯ ಹೆದ್ದಾರಿಗಳನ್ನು 4 ಸಾವಿರ ಕಿ.ಮೀ. ವರೆಗಿನ ರಸ್ತೆ ನಿರ್ಮಿಸುವಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ಗ್ರಾಮೀಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಒತ್ತು ನೀಡಲಾಗಿದೆ, ಹಾಗೂ ಪ್ರವಾಸೋದ್ಯಮ, ನೀರಾವರಿ ನಿಗಮಗಳ ಜೊತೆಗೂಡಿ ರಸ್ತೆ ಸೇತುವೆ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಚೆಂಬು ಗ್ರಾಪಂನಲ್ಲಿ ಚೆಟ್ಟಿಮಾನಿ-ಕಲ್ಲುಗುಂಡಿ-ದಬ್ಬಡ್ಕ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾಗಿ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ. ಸೇತುವೆ ನಿರ್ಮಾಣದಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ, ಮುಂದಿನ ದಿನಗಳಲ್ಲಿ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕಲ್ಲುಗುಂಡಿ, ದಬ್ಬಡ್ಕ ಹಾಗೂ ಚೆಟ್ಟಿಮಾನಿ ಮಾರ್ಗವಾಗಿ ಭಾಗಮಂಡಲಕ್ಕೆ ಸುಗಮ ರಸ್ತೆ ವ್ಯವಸ್ಥೆಯನ್ನು ಮಾಡುವಂತಾಗಬೇಕು. ಇದರಿಂದ ಕೊಡಗಿನ ಗಡಿ ಭಾಗದ ಜನರ ಸಮಸ್ಯೆಗೂ ಸ್ಪಂದನೆ ನೀಡುವಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಚೆಂಬು ಗ್ರಾಪಂ ಅಧ್ಯಕ್ಷ ಪಿ.ಕೆ.ಮಾದವ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಸಂಪಾಜೆ ಗ್ರಾಪಂ ಅಧ್ಯಕ್ಷ ಬಾಲಚಂದ್ರ ಕಳಗಿ, ಸುಬ್ರಮಣ್ಯ ಉಪಾಧ್ಯಯ, ಪ್ರಮುಖರಾದ ಟಿ.ಪಿ.ರಮೇಶ್, ಬಿ.ಟಿ.ಪ್ರದೀಪ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಎಂ.ಜೆ.ಕಾಂತರಾಜು, ಎಇಇ ಸತ್ಯನಾರಾಯಣ, ನಬಾರ್ಡ್ ಯೋಜನಾಧಿಕಾರಿ ಮುಂಡಂಡ ಸಿ.ನಾಣಯ್ಯ ಮತ್ತಿತರರು ಹಾಜರಿದ್ದರು.
ಡೆಂಗ್ ವಿರುದ್ಧ ಕ್ರಮಕ್ಕೆ ಸೂಚನೆ:
ಜಿಲ್ಲಾ ಉಸ್ತುವಾರಿ ಸಚಿವರು ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಭೆೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದಭರ್ದಲ್ಲಿ ಸ್ಥಳೀಯರು ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಡೆಂಗ್ ಸಮಸ್ಯೆ ಸಾಕಷ್ಟಿದ್ದು, ಈ ಬಗ್ಗೆ ಅಗತ್ಯ ವೈದ್ಯಕೀಯ ಸೌಲಭ್ಯ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಡೆಂಗ್ ಜ್ವರ ಬರುವಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಗಬೇಕು ಮತ್ತು ಈಗಾಗಲೇ ವೈದ್ಯರ ನೇಮಕಾತಿಗಾಗಿ ಕೌನ್ಸೆಲಿಂಗ್ ನಡೆಯುತ್ತಿದ್ದು, ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಿಸುವಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಈ ಸಂದಭರ್ ತಾಲೂಕು ವೈದ್ಯಾಧಿಕಾರಿ ರವಿಕುಮಾರ್, ಸ್ಥಳೀಯರಾದ ಮಾಧವ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.