×
Ad

ಕಾರವಾರ: ತಾಲೂಕು ಪಂಚಾಯತ್ ಕೆಡಿಪಿ ಸಭೆ

Update: 2016-06-07 23:35 IST

ಕಾರವಾರ, ಜೂ.7: ಅಂಗನವಾಡಿಗಳಲ್ಲಿನ ಮೂಲಭೂತ ಸಮಸ್ಯೆ ಹಾಗೂ ಚರಂಡಿ ಸಮಸ್ಯೆಗಳ ಕುರಿತು ನಗರದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಭಾರೀ ಚರ್ಚೆ ನಡೆದಿದ್ದು, ಇದಕ್ಕೆ ಉತ್ತರಿಸಲು ಅಧಿಕಾರಿಗಳು ತಡವರಿಸಿದರು.

ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ಅಮದಳ್ಳಿ ಭಾಗದಲ್ಲಿರುವ 11 ಅಂಗನವಾಡಿಗಳ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ವಿದ್ಯುತ್ ಸಂಪರ್ಕ ಇರುವ ಅಂಗನವಾಡಿಗೆ ವಿದ್ಯುತ್ ಬಿಲ್ ಪಾವತಿ ಮಾಡುವ ಬಗ್ಗೆಯೂ ಪ್ರಸ್ಥಾಪಿಸಿದರು.

ಬೇಸಿಗೆಯಲ್ಲಿ ಮಕ್ಕಳಿಗೆ ಅನುಕೂಲವಾಗುಂತೆ ಎಲ್ಲ ಅಂಗನವಾಡಿಗಳಿಗೂ ಫ್ಯಾನ್ ಅಳವಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ 10 ಸಾವಿರ ರೂ. ಸರಕಾರ ನೀಡಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ತಿಳಿಸಿದರು. ವಿದ್ಯುತ್ ಬಿಲ್ ಪಾವತಿಸಲು ಆಯಾ ಗ್ರಾಮ ಪಂಚಾಯತ್‌ಗೆ ಪತ್ರ ಬರೆದಿರುವುದಾಗಿ ಹೇಳಿದರು.

  

ಮಾಜಾಳಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಯೊಂದು ಬಂದ್ ಆಗಿದ್ದರೂ ಅದರ ರಿಪೇರಿ ಕೆಲಸ ಮಾಡಲಾಗುತ್ತಿದೆ ಎಂದು ಗಮನ ಸೆಳೆದರು. ಬಂದ್ ಆದ ಶಾಲಾ ಕಟ್ಟಡ ದುರಸ್ತಿ ಮಾಡಿ ಹಣ ಹಾಳು ಮಾಡಲಾಗಿದೆ ಎಂದು ತಾಪಂ ಉಪಾಧ್ಯಕ್ಷ ರವೀಂದ್ರ ಪವಾರ್ ದೂರಿದರು. ಶಿಕ್ಷಣ ಇಲಾಖೆ ನಡೆಸಿದ ಕೆಲಸ ಇದಲ್ಲ ಎಂದು ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಸ್ಪಷ್ಟ ಪಡಿಸಿದರು. ನಗರದಲ್ಲಿ ಚರಂಡಿ ಹಾಗೂ ರಸ್ತೆ ಪಕ್ಕದ ಹೊಂಡಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆ ಹೆಚ್ಚುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಚರ್ಚಿಸಲು ನಗರ ಸಭೆಯವರು ತಾಲೂಕು ಕೆಡಿಪಿಯಲ್ಲಿ ಭಾಗವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ತಾಲೂಕಿನಲ್ಲಿ ಒಟ್ಟು 5 ಡೆಂಗ್ ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಶಿರವಾಡ ಗ್ರಾಮದಲ್ಲಿನ ಪ್ರಕರಣಗಳೇ ಹೆಚ್ಚಿವೆ. ಬೇರೆಡೆಯಿಂದ ವಲಸೆ ಬಂದವರಲ್ಲಿ ಜ್ವರ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಲೂಕಿನಲ್ಲಿ 2,210 ಹೆಕ್ಟೇರ್ ಭತ್ತ ಬೆಳೆಯುವ ಕ್ಷೇತ್ರವಿದ್ದು, 304 ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಇದರಲ್ಲಿ 160 ಕ್ವಿಂಟಾಲ್ ಬೀಜ ಈಗಾಗಲೇ ಪೂರೈಕೆಯಾಗಿದೆ ಎಂದು ಕೃಷಿ ಅಧಿಕಾರಿ ಸಭೆಯ ಗಮನಕ್ಕೆ ತಂದರು. ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಕಾರ್ಯನಿರ್ವಹಣಾಕಾರಿ ಎಸ್. ಆರ್. ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News