ಜನಪ್ರಿಯತೆಯ ಹಿಂದಿನ ವಾಸ್ತವಗಳು...

Update: 2016-06-07 18:27 GMT

2014, ಜನವರಿ 3ರಂದು ಆಂಗ್ಲ ಪತ್ರಿಕೆಯೊಂದು ಸ್ವಾರಸ್ಯಕರವಾದ ಲೇಖನವೊಂದನ್ನು "Modi will be disaster for India" (ಮೋದಿ ಭಾರತಕ್ಕೊಂದು ವಿಪತ್ತು ಆಗಲಿದ್ದಾರೆ) ಎಂಬ ತಲೆಬರಹದೊಂದಿಗೆ ಪ್ರಕಟಿಸಿತ್ತು. ಪ್ರಧಾನಿಯಾಗಿ ಮನಮೋಹನ್‌ಸಿಂಗ್ ತನ್ನ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಹೀಗೆ ಹೇಳಿದ್ದರು: ‘‘ನರೇಂದ್ರ ಮೋದಿಯವರ ಅರ್ಹತೆಗಳ ಬಗ್ಗೆ ಚರ್ಚಿಸದೆ ನಾನು ಪ್ರಾಮಾಣಿಕವಾಗಿ ನಂಬಿರುವುದೇನೆಂದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ದೇಶಕ್ಕೆ ವಿಪತ್ತಾಗಲಿದ್ದಾರೆ’’... ಈ ಹಿರಿಯ ವ್ಯಕ್ತಿಯು ‘ಅರ್ಹತೆಗಳನ್ನು ಚರ್ಚಿಸದೆ’ ಎಂಬ ಮಾತನ್ನು ಯಾವ ಅರ್ಥದಲ್ಲಿ ಹೇಳಿದ್ದರು?’’ ಹಾಗೂ ಮೋದಿ ದೇಶಕ್ಕೊಂದು ವಿಪತ್ತಾಗಲಿದ್ದಾರೆಂದು ಅವರು ಯಾಕೆ ನಿರ್ದಿಷ್ಟವಾಗಿ ಯೋಚಿಸಿದರು. ಈ ವಿಷಯಗಳ ಬಗ್ಗೆ ಅವರಿಗೆ ಕಡಿಮೆ ಅಸ್ಪಷ್ಟತೆಯಿರಬೇಕಿತ್ತೆಂದು ಯಾರಾದರೂ ಆಶಿಸಿರಬಹುದು.

ಮೋದಿ ಪ್ರಧಾನಿಯಾಗಿ ಎರಡು ವರ್ಷಗಳೇ ಕಳೆದಿವೆ ಹಾಗೂ ಅವರು ಅಪಾಯಕಾರಿಯಲ್ಲವೆಂದು ಸುಲಭವಾಗಿ ಹೇಳಿಬಿಡಬಹುದು. ಅವರ ದೃಷ್ಟಿಕೋನದಲ್ಲಿನ ಸ್ಪಷ್ಟತೆ ಹಾಗೂ ಅವರ ಆಡಳಿತದ ಪರಿಣಾಮಕಾರಿತ್ವ ಮತ್ತು ಅವರು ಮಂಡಿಸಿದ ಮಸೂದೆಗಳಿಂದಾಗಿರುವ ಬದಲಾವಣೆಗಳ ಬಗ್ಗೆ ಅರಿಯಲು ನಮಗೆ ಇನ್ನೂ ಸಮಯ ಬೇಕಾದೀತು. ಆದರೆ ದಶಕಗಳಲ್ಲಿಯೇ ಮೋದಿ ಅತ್ಯಂತ ಜನಪ್ರಿಯ ನಾಯಕನೆಂಬುದರಲ್ಲಿ ಎರಡು ಮಾತಿಲ್ಲ. ಮೋದಿ ಕಳೆದ ಎರಡು ವರ್ಷಗಳಲ್ಲಿ ದೊರೆತಂತಹ ಜನಪ್ರಿಯತೆಯನ್ನು ರಾಜೀವ್‌ಗಾಂಧಿಯಾಗಲಿ ಅಥವಾ ಅಟಲ್‌ಬಿಹಾರಿ ವಾಜಪೇಯಿ ಅವರಿಗಾಗಲಿ ಗಳಿಸಲು ಸಾಧ್ಯವಾಗಿಲ್ಲ.

 ಪ್ರಧಾನಿಗೆ ಈ ಸಂಗತಿ ಚೆನ್ನಾಗಿ ಅರಿವಿದೆ. ಕೆಲವೇ ದಿನಗಳ ಹಿಂದೆ ಅವರು ಒಡಿಶಾದಲ್ಲಿ ಹೀಗೆ ಹೇಳಿದ್ದರು. ‘‘ನಮ್ಮ ದೇಶದಲ್ಲಿ ಓರ್ವ ವ್ಯಕ್ತಿ ಅಥವಾ ಸಿಲೆಬ್ರಿಟಿ ಅಥವಾ ಸರಕಾರ ಜನಪ್ರಿಯತೆಯ ತುತ್ತತುದಿಗೇರುತ್ತಾರೆ. ಆದರೆ ಮೂರು, ಆರು ಅಥವಾ ಒಂಬತ್ತು ತಿಂಗಳುಗಳೊಳಗೆ ಜನರು ಅವರನ್ನು ತಿರಸ್ಕರಿಸಲಾರಂಭಿಸುತ್ತಾರೆ. ನಾವು ಹೀಗಾಗುವುದನ್ನು ಅನೇಕ ಸಲ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ, ಅಧಿಕಾರಕ್ಕೇರಿದ ಎರಡು ವರ್ಷಗಳ ಬಳಿಕವೂ ಸರಕಾರಕ್ಕೆ ಪ್ರೀತಿ ಹಾಗೂ ಆಶೀರ್ವಾದಗಳ ಸುರಿಮಳೆಯಾಗುತ್ತಿರುವುದನ್ನು ನಾವೀಗ ಕಾಣುತ್ತಿದ್ದೇವೆ’’.

   ‘‘ಸರಕಾರಕ್ಕೆ ಒಲವಿನ ಸುರಿಮಳೆಯಾಗುತ್ತಿದೆ’’ ಎಂಬ ಮಾತನ್ನು ಅವರು, ‘ನನಗೆ’ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಯಾಕೆಂದರೆ ಏನಿದ್ದರೂ ಇದು ‘ಮೋದಿ ಸರಕಾರ್’ ಆಗಿದೆ. ಅವರು ಈಗಲೂ ಅಪಾರ ಜನಪ್ರಿಯತೆ ಹೊಂದಿದ್ದಾರೆಂಬುದನ್ನು ಪ್ರತಿಯೊಂದು ಸಮೀಕ್ಷೆಯು ತೋರಿಸಿಕೊಟ್ಟಿದೆ. ಪಕ್ಷದೊಳಗೆ ವಿವಾದಾತೀತ ನಾಯಕನಾಗಿ ಅಥವಾ ಹೊರಗೆ ಯಾವುದೇ ಪ್ರತಿಸ್ಪರ್ಧಿಯಿಲ್ಲದೆ, ಸಮಗ್ರ ಭಾರತದ ನಾಯಕನಾಗಿ ಮೋದಿ, ಜನಪ್ರಿಯತೆಯಲ್ಲಿ ಇಂದಿರಾಗಾಂಧಿಗೆ ಸರಿಸಮವಾಗಿ ನಿಲ್ಲುತ್ತಾರೆ.

 ಜನಮತ ಸಮೀಕ್ಷಾ ಏಜೆನ್ಸಿ ‘ಇನ್‌ಸ್ಟಾ ವಾಣಿ’ ಮೋದಿ ಪ್ರಧಾನಿಯಾದಾಗಿನಿಂದ ಅವರ ಜನಪ್ರಿಯತೆಯ ಜಾಡನ್ನು ಹಿಡಿಯುತ್ತಾ ಬಂದಿದೆ ಹಾಗೂ ಮೋದಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆಂದು ಹೇಳಿಕೊಳ್ಳುವ ಭಾರತೀಯರ ಸಂಖ್ಯೆ ಶೇ. 74ರ ಆಸುಪಾಸಿನಲ್ಲಿದೆ ಎಂದು ಅದು ಸಮೀಕ್ಷೆಯೊಂದರಲ್ಲಿ ಬಹಿರಂಗಪಡಿಸಿದೆ. ಇದೊಂದು ಆಶ್ಚರ್ಯಕರ ಸಂಖ್ಯೆಯಾಗಿದೆ ಹಾಗೂ ಅಮೆರಿಕ ಅಧ್ಯಕ್ಷರು ಇಂತಹ ಜನಪ್ರಿಯತೆಯ ರೇಟಿಂಗ್ ಅನ್ನು ಕಂಡು ಅಸೂಯೆಪಡಬಹುದು.

 ಮೋದಿ ಸರಕಾರದ ಎರಡನೆ ವರ್ಷಾಚರಣೆಯ ಸಂದರ್ಭದಲ್ಲಿ ‘ರೆಡಿಫ್’ ಅಂತರ್ಜಾಲ ತಾಣವು ಕುತೂಹಲಕಾರಿಯಾದ ಸಮೀಕ್ಷೆ ಯೊಂದನ್ನು ನಡೆಸಿತ್ತು. ಅದು ಹತ್ತು ಪ್ರಶ್ನೆಗಳನ್ನು ಕೇಳಿತ್ತು. ಮೊದಲನೆ ಪ್ರಶ್ನೆ ಪೇಚಿಗೆ ಸಿಲುಕಿಸುವಂತಹ ರೀತಿಯಲ್ಲಿತ್ತು. ‘‘ಒಂದು ವೇಳೆ ಇಂದೇ ಚುನಾವಣೆ ನಡೆದಲ್ಲಿ, ನೀವು ಈಗಲೂ ಬಿಜೆಪಿಗೆ ಮತ ಹಾಕುವಿರಾ’’ ಎಂದು ಕೇಳಲಾಗಿತ್ತು. ನಾನು ಇದನ್ನು ಅಸಂಬದ್ಧವೆಂದು ಯಾಕೆ ಹೇಳುತ್ತೇನೆಂದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬನೂ ಬಿಜೆಪಿಗೆ ಮತ ಚಲಾಯಿಸಿದ್ದಾನೆಂದು ಅದು ಭಾವಿಸಿದಂತಿದೆ. ಆದರೆ ಬಿಜೆಪಿಗೆ ಆಗ ಸಿಕ್ಕಿದ್ದು ಶೇ.32ರಷ್ಟು ಮತ ಮಾತ್ರ. ಅದೇನೇ ಇದ್ದರೂ, ಸಮೀಕ್ಷೆಯಲ್ಲಿ ಪಾಲ್ಗೊಂಡ 40 ಸಾವಿರಕ್ಕೂ ಅಧಿಕ ಮತಗಳ ಪೈಕಿ ಶೇ.85ರಷ್ಟು ಮತಗಳು ಮೋದಿಯ ಪರವಾಗಿದ್ದವು.

 ‘ಅಚ್ಚೆ ದಿನ್’ ಆಗಮಿಸಿದೆಯಾ ಎಂಬ ಪ್ರಶ್ನೆಗೆ ಶೇ.70ಕ್ಕೂ ಅಧಿಕ ಮಂದಿ ಹೌದೆಂದಿದ್ದಾರೆ ಹಾಗೂ ಮೋದಿ ಉತ್ತಮ ಪ್ರಧಾನಿಯೆಂದು ಶೇ.83 ಮಂದಿ ಹೇಳಿದ್ದಾರೆ. ಪಾಕಿಸ್ತಾನ ನೀತಿ ಅಥವಾ ಉದ್ಯೋಗ ಸೃಷ್ಟಿಯಂತಹ ಕ್ಷೇತ್ರಗಳಲ್ಲಿ ಈವರೆಗೆ ಮೋದಿ ವಿಫಲರಾಗಿದ್ದಾರೆಂದು ವಿಶ್ಲೇಷಕರೂ ಹೇಳಿದ್ದರೂ, ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮಂದಿ ತಮಗೆ ತೃಪ್ತಿಯಾಗಿದೆಯೆಂದಿದ್ದಾರೆ.

ಈ ಎರಡೂ ಸಮೀಕ್ಷೆಗಳನ್ನು ಮೊಬೈಲ್ ಫೋನ್‌ಗಳು ಹಾಗೂ ಇಂಟರ್‌ನೆಟ್ ಮೂಲಕ ನಡೆಸಲಾಗಿತ್ತೆಂಬುದು ನಿಜ. ಅಂದರೆ, ಇವರಲ್ಲಿ ಎಲ್ಲರೂ ಅಲ್ಲದಿದ್ದರೂ, ಹೆಚ್ಚಿನವರು ಪ್ರಾಯಶಃ ನಗರ, ಮಧ್ಯಮವರ್ಗ ಹಾಗೂ ಇಂಗ್ಲಿಷ್‌ಭಾಷಾ ಜ್ಞಾನ ಹೊಂದಿದವರಾಗಿದ್ದಾರೆ. ಹಿಂದಿನಿಂದಲೂ ಈ ವರ್ಗವು ಮೋದಿಯನ್ನು ಬೆಂಬಲಿಸುತ್ತಲೇ ಬಂದಿದೆ. ಆದಾಗ್ಯೂ ಕೆಲವು ದತ್ತಾಂಶಗಳನ್ನು ಅತಿರಂಜಿತವಾಗಿ ಬಿಂಬಿಸಲಾಗಿದೆಯೆಂಬುದಾಗಿ ನಾವು ಹೇಳಬಹುದಾಗಿದೆ.

ಆದರೆ ಮೋದಿ ಗ್ರಾಮೀಣ ಭಾರತದಲ್ಲಿಯೂ ಜನಪ್ರಿಯರಾಗಿದ್ದಾ ರೆಂಬುದು ಕೂಡಾ ನಿಜ. ತನ್ನ ಜನಪ್ರಿಯತೆಯ ಬಗ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದುದು ಒಡಿಶಾದ ಬಾಲಸೋರ್‌ನಲ್ಲಿ ನಡೆದ ರ್ಯಾಲಿಯಲ್ಲಾಗಿತ್ತು ಹಾಗೂ ಅದು ಜನರಿಂದ ಕಿಕ್ಕಿರಿದು ತುಂಬಿತ್ತು. ಭಾರತದ ಎಲ್ಲೆಡೆಯೂ ತನ್ನ ಸಭೆಗೆ ಐದು ಲಕ್ಷಕ್ಕೂ ಅಧಿಕ ಮಂದಿಯನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿರುವುದು ಸುಲಭದ ಮಾತೇನಲ್ಲ. ಹೀಗಾಗಿ ಅವರು ನಗರ ಹಾಗೂ ಗ್ರಾಮೀಣ ಭಾರತೀಯರಿಬ್ಬರಲ್ಲೂ ಜನಪ್ರಿಯರಾಗಿದ್ದಾರೆಂದು ತೀರ್ಮಾನಿಸುವುದು ತರ್ಕಬದ್ಧವಾದುದಾಗಿದೆ. ಯಾಕೆ ಹೀಗೆಂಬುದು ಇಲ್ಲಿರುವ ನಿಜವಾದ ಪ್ರಶ್ನೆಯಾಗಿದೆ.


ಮೋದಿ ಈಗಲೂ ಯಾಕೆ ಜನಪ್ರಿಯ?
ಆರ್ಥಿಕ ಬೆಳವಣಿಗೆಯು ಶೇ.8ರ ಕೆಳಗಿದ್ದರೂ, ಪಾಕಿಸ್ತಾನ ಕುರಿತ ನೀತಿಯು ಗೊಂದಲಕರವಾಗಿದ್ದರೂ ಹಾಗೂ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ನೈಜ ಬದಲಾವಣೆಯಾಗದಿದ್ದರೂ, ಯಾಕೆ ಮೋದಿ ಈಗಲೂ ಜನಪ್ರಿಯರಾಗಿದ್ದಾರೆ?.

ನನ್ನ ಊಹೆ ಹೀಗಿದೆ. ಮೊದಲನೆಯದಾಗಿ ಅವರು ವಿಶ್ವಸನೀಯರಾಗಿ ದ್ದಾರೆ. ತಾನು ಭಾರತವನ್ನು ಬದಲಾಯಿಸಲು ಕಷ್ಟಪಟ್ಟು ಶ್ರಮಿಸುತ್ತಿರು ವುದಾಗಿ ಮೋದಿ ಮನಮುಟ್ಟುವಂತೆ ಹೇಳುತ್ತಿದ್ದಾರೆ. ತಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ವಿಶ್ವಸನೀಯತೆಯನ್ನು ಅವರು ತುಂಬುತ್ತಿದ್ದಾರೆ. ಸಾಮಾಜಿಕ ಮಾಧ್ಯಮವಿರಲಿ ಅಥವಾ ಅವರ ವಿದೇಶ ಭೇಟಿಯಾಗಿರಲಿ ಇಲ್ಲವೇ ಚುನಾವಣಾ ಪ್ರಚಾರವಾಗಿರಲಿ ಅಲ್ಲೆಲ್ಲಾ ಅವರು ನಾಯಕನಾಗಿ ಕಂಗೊಳಿಸುತ್ತಾರೆ. ಉದಾಹರಣೆಗೆ, ಅವರು ದೇಶದ ಆಡಳಿತವನ್ನು ನಿರ್ವಹಿಸುತ್ತಿದ್ದರೂ, ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್‌ಗಾಂಧಿಗಿಂತ ಹೆಚ್ಚು ಶ್ರಮಪಟ್ಟಿದ್ದರು.

ಎರಡನೆಯದಾಗಿ ಅವರು ಸ್ವಚ್ಛಭಾರತ ಹಾಗೂ ಮೇಕ್ ಇನ್ ಇಂಡಿಯಾದಂತಹ ಸರಕಾರದ ದೀರ್ಘಾವಧಿಯ ಕಾರ್ಯಕ್ರಮಗಳಿಗೆ ತನ್ನ ವಿಶ್ವ್ವಾಸಾರ್ಹತೆಯನ್ನೇ ಪಣವಾಗಿಟ್ಟಿದ್ದರು. ಬದಲಾವಣೆ ನಡೆಯುವಂತಾಗಲು ಜನರು ಮೋದಿಗೆ ಕಾಲಾವಕಾಶವನ್ನು ನೀಡುವ ಇಚ್ಛೆಯನ್ನು ಹೊಂದಿದ್ದಾರೆ. ಮೂರನೆಯದಾಗಿ ತನ್ನ ಚಟುವಟಿಕೆಗಳ ಸುದ್ದಿಗಳೊಂದಿಗೆ ಮಾಧ್ಯಮಗಳನ್ನು ಸದಾ ಬ್ಯುಸಿಯಾಗಿಡುತ್ತಿದ್ದಾರೆ. ಆದರೆ ಈ ಚಟುವಟಿಕೆಗಳು ನಿಜಕ್ಕೂ ಫಲದಾಯಕವೇ ಎಂಬುದು ಚರ್ಚಾಸ್ಪದವಾದುದಾಗಿದೆ. ಆದರೆ ಅವುಗಳ ಬಗ್ಗೆ ಮಾತನಾಡಲಾಗುತ್ತದೆ ಯೆಂಬುದು ಮಾತ್ರ ವಿವಾದಾತೀತವಾದುದು.ಕಳೆದ ಎರಡು ವರ್ಷಗಳಲ್ಲಿ ಕಾರ್ಯಸೂಚಿಯನ್ನು ರೂಪಿಸುತ್ತಿರುವುದು ಮೋದಿಯೇ ಹೊರತು ಪ್ರತಿಪಕ್ಷವಲ್ಲ.

 ಸರಕಾರದಲ್ಲಿ ಇಲ್ಲದೇ ಇರುವಾಗ ತಾನು ವಿರೋಧಿಸಿದ್ದ ‘ನರೇಗಾ’ದಂತಹ ಸಮಾಜವಾದಿ ಮಾದರಿಯ ಕಾರ್ಯಕ್ರಮಗಳನ್ನು ‘ಕೊಲ್ಲದೆ ’ ಇರುವ ಮೂಲಕ ಅವರು ಮುತ್ಸದ್ಧಿತನವನ್ನು ಪ್ರದರ್ಶಿಸಿದ್ದಾರೆ. ಸರಕಾರವು ಸಂಪೂರ್ಣ ಬಂಡವಾಳಶಾಹಿಯಾಗಿರಬೇಕೆಂಬ ನಿಲುವು ಹೊಂದಿರುವ ಅವರ ಬೆಂಬಲಿಗರಿಗೆ ಇದರಿಂದ ತುಸು ಅಸಮಾಧಾನವಾಗಿದೆ. ಅದೇನಿದ್ದರೂ, ಮೋದಿ ಬಗ್ಗೆ ಬಡವರಿಗೆ ಯಾವುದೇ ಆಕ್ರೋಶವುಂಟಾಗದಿರುವುದನ್ನು ಈ ಯೋಜನೆಗಳು ಖಾತರಿಪಡಿಸಿವೆ ಹಾಗೂ ಪ್ರತಿಪಕ್ಷಗಳಿಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಡಿಮೆ ಅವಕಾಶವನ್ನು ನೀಡಿತು.

   ಐದನೆ ಹಾಗೂ ಕೊನೆಯ ಅಂಶವೇನೆಂದರೆ, ಅವರ ಮೆಚ್ಚುಗೆಗೆ ಅರ್ಹವಾದ ವ್ಯಕ್ತಿತ್ವವಾಗಿದೆ. ಅವರೊಬ್ಬ ಆಕರ್ಷಕ, ಮನರಂಜನಾತ್ಮಕ ವ್ಯಕ್ತಿಯಾಗಿದ್ದಾರೆ. ಅವರು ಬೋರ್ ಹೊಡೆಸೋದು ತುಂಬಾ ಅಪರೂಪ. ಮನಮೋಹನ್‌ಸಿಂಗ್ ಅವರಲ್ಲಿ ಕಾಣಸಿಗದಂತಹ ಮೋಡಿ ಮಾಡುವ ವ್ಯಕ್ತಿತ್ವ ಮೋದಿಯವರಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಹಾಗೂ 2019ರ ಚುನಾವಣೆಯ ಆನಂತರವೂ ಇದು ಕಾಣಸಿಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ಕನಿಷ್ಠ ಪಕ್ಷ ಸದ್ಯದ ಮಟ್ಟಿಗಾದರೂ ಮನಮೋಹನ್‌ಸಿಂಗ್ ಅವರ ಭವಿಷ್ಯವಾಣಿಯನ್ನು, ಬಹುತೇಕ ಭಾರತೀಯರು ಸಮಗ್ರವಾಗಿ ತಿರಸ್ಕರಿಸಿದ್ದಾರೆ.

(ಕೃಪೆ ಡೆಕ್ಕನ್ ಹೆರಾಲ್ಡ್)

Writer - ಆಕಾರ್ ಪಟೇಲ್

contributor

Editor - ಆಕಾರ್ ಪಟೇಲ್

contributor

Similar News