ಝಂ ಝಂ ಬಾವಿಯಿಂದ ಬರುವ ನೀರು ಎಷ್ಟು ಗೊತ್ತೇ?
ಜಗತ್ತಿನ ಮೂಲೆ ಮೂಲೆಗಳ ಅಸಂಖ್ಯಾತ ಮಂದಿಯ ನೀರಡಿಕೆ ಇಂಗಿಸುವ ಝಂ ಝಂ ಬಾವಿಯಲ್ಲಿ ಸೆಕೆಂಡಿಗೆ 11- 19 ಲೀಟರ್ ನೀರು ಚಿಮ್ಮುತ್ತದೆ.
ಪವಿತ್ರ ಕಅಬಾ ದಿಂದ 20 ಮೀಟರ್ ದೂರದಲ್ಲಿರುವ ಈ ಬಾವಿಯ ಕಥೆ, ಪ್ರವಾದಿ ಇಬ್ರಾಹೀಂ(ಅ) ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಈ ಅಕ್ಷಯ ಬಾವಿಯೇ ಸೌದಿ ಅರೇಬಿಯಾದ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಕ್ಕಾವನ್ನು ಪರಿವರ್ತಿಸಿದ್ದು. ಸೌದಿ ಭೌಗೋಳಿಕ ಸರ್ವೇ ಸಂಸ್ಥೆಯ ಅಧ್ಯಕ್ಷ ಜುಹೈರ್ ನವಾಬ್ ಅವರು ಬಾವಿಯ ಇತಿಹಾಸವನ್ನು ಹೀಗೆ ವಿವರಿಸುತ್ತಾರೆ ಎಂದು ಸೌದಿ ಗಜೆಟ್ ಉಲ್ಲೇಖಿಸಿದೆ: "ಈ ಐತಿಹಾಸಿಕ ಬಾವಿಯು ಒಣಭೂಮಿಯಾಗಿದ್ದ ಮಕ್ಕಾವನ್ನು ಜನನಿಬಿಡ ಪ್ರದೇಶವಾಗಿ ಪರಿವರ್ತಿಸಿದೆ. ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣಭಾಗದಿಂದ ಅಪಾರ ಜನರನ್ನು ಆಕರ್ಷಿಸುತ್ತದೆ. ಇವರು ಬ್ಯಾರಲ್‌ಗಳಲ್ಲಿ ಪವಿತ್ರ ಝಂ ಝಂ ನೀರನ್ನು ತುಂಬಿಕೊಂಡು ಹೋಗಿ, ಸ್ನೇಹಿತರು ಹಾಗೂ ಕುಟುಂಬದವರಿಗೆ ವಿತರಿಸುತ್ತಾರೆ"
ಝಂ ಝಂ ನೀರನ್ನು ಶುದ್ಧೀಕರಿಸುವ ಸಲುವಾಗಿ ಸೌದಿ ಸರ್ಕಾರ 700 ದಶಲಕ್ಷ ಸೌದಿ ರಿಯಾದ್‌ಗಳ ಯೋಜನೆಯನ್ನು 2010ರಲ್ಲಿ ಘೋಷಿಸಿದೆ. ಯಾತ್ರಾರ್ಥಿಗಳಿಗೆ ಶುದ್ಧ ನೀರು ನೀಡುವ ಸಲುವಾಗಿ ಮಸೀದಿಯ ಪಕ್ಕದಲ್ಲಿ ಶುದ್ಧೀಕರಣ ಘಟಕ ತೆರೆದಿದೆ. ಕಿಂಗ್ ಅಬ್ದುಲ್ಲಾ ಝಂ ಝಂ ನೀರಿನ ಘಟಕ ದಿನಕ್ಕೆ 2 ಲಕ್ಷ ಬಾಟಲಿ ನೀರನ್ನು ಉತ್ಫಾದಿಸುತ್ತದೆ. ರಮಝಾನ್ ಸಂದರ್ಭದಲ್ಲಿ ಮತ್ತು ಹಜ್ ಯಾತ್ರೆ ಸಂದರ್ಭದಲ್ಲಿ ಹೆಚ್ಚು ಉತ್ಪಾದಿಸಲಾಗುತ್ತದೆ ಎಂದು ನವಾಬ್ ವಿವರಿಸುತ್ತಾರೆ.