ಕೆರೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಲು ಅವಕಾಶವಿಲ್ಲ: ಕೋಳಿವಾಡ

Update: 2016-06-08 17:10 GMT

ಬೆಂಗಳೂರು, ಜೂ.8: ಕೆರೆ, ರಾಜಕಾಲುವೆ ಹಾಗೂ ಬಫರ್‌ಝೋನ್ ವ್ಯಾಪ್ತಿಯ ಪ್ರದೇಶಗಳಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಅದೇ ರೀತಿ, ನಾಗರಿಕರು ಬೆಂಗಳೂರು ವ್ಯಾಪ್ತಿಯಲ್ಲಿ ನಿವೇಶನ ಖರೀದಿಸುವ ಮೊದಲು ಸೂಕ್ತ ದಾಖಲೆ ಪರಿಶೀಲನೆ ಮಾಡಬೇಕೆಂದು ಕೆರೆಗಳ ಒತ್ತುವರಿ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
 ಬುಧವಾರ ನಗರದ ಶಾಸಕರ ಭವನದ ಸಭಾಂಗಣದಲ್ಲಿ ಬೆಂಗಳೂರು ನಗರದ ಮತ್ತು ಸುತ್ತಮುತ್ತಲಿನ ಕೆರೆಗಳ ಒತ್ತುವರಿ ಬಗ್ಗೆ ರಚಿಸಲಾಗಿರುವ ಸದನ ಸಮಿತಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆರೆ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಯಾವುದೇ ಕಟ್ಟಡ ನಿರ್ಮಾಣ ಮಾಡದಿರಲು ಬಿಡಿಎ, ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಕೆರೆ ಒತ್ತುವರಿ ಕುರಿತ ಸಮೀಕ್ಷೆ ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಈ ಬಗ್ಗೆ ವರದಿ ಸದನ ಸಮಿತಿಯ ಕೈ ಸೇರಲಿದೆ. ಅಲ್ಲದೆ, ಈಗಾಗಲೇ ಕಟ್ಟಡ ನಿರ್ಮಿಸಿಕೊಂಡಿರುವ ಬಗೆ,್ಗ ಅವುಗಳನ್ನು ಒಡೆದು ಹಾಕುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಹೊಸದಾಗಿ ಕಟ್ಟುವುದಕ್ಕೆ ಅವಕಾಶ ಮಾಡಿಕೊಡದಂತೆ ಮತ್ತು ಈಗಾಗಲೇ ಕಾಮಗಾರಿ ಆರಂಭವಾಗಿರುವ ಕಟ್ಟಡಗಳನ್ನು ಅಲ್ಲಿಗೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅದೇ ರೀತಿ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಪೀಠದ ಆದೇಶದ ಹಿನ್ನೆಲೆಯಲ್ಲಿ ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿರುವುದನ್ನು ತಡೆದು ಹಾಗೂ ಹೊಸದಾಗಿ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವವರಿಗೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೋಳಿವಾಡ ತಿಳಿಸಿದರು.
ತದನಂತರ ಬೆಂಗಳೂರು ವ್ಯಾಪ್ತಿಯ ಹುಳಿಮಾವು ಮತ್ತು ಅರಕೆರೆ ಕೆರೆಗಳ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ಈ ಎರಡು ಕೆರೆಗಳ ಜಾಗದಲ್ಲಿ ಪ್ರಭಾವಿ ವ್ಯಕ್ತಿಗಳು ಬೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಅದೇ ರೀತಿ, ಬಿಡಿಎ ಬಡಾವಣೆಗಳನ್ನು ನಿರ್ಮಿಸಿದೆ. ಈ ಸಂಬಂಧ ಕೆರೆ ಜಾಗದಲ್ಲಿರುವವರಿಗೆ ನೋಟಿಸ್ ಜಾರಿಗೊಳಿಸುವ ಜೊತೆಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ ಎಂದರು.
ಸಾರ್ವಜನಿಕರೇ ಎಚ್ಚರ:
ಬೆಂಗಳೂರಿನಲ್ಲಿ ಪ್ರತಿಯೊಬ್ಬರೂ ಸ್ವಂತ ನಿವೇಶನ, ಮನೆ ಹೊಂದುವ ಕನಸು ಸಹಜ. ಹೀಗಾಗಿ ಆಸ್ತಿ ಖರೀದಿಸುವ ಮುನ್ನ, ಮಾರುವವರ ಆಸ್ತಿ ಕಾನೂನುಬದ್ಧವಾಗಿದೆಯೋ, ಇಲ್ಲವೇ ಎನ್ನುವ ಬಗ್ಗೆ ಎಚ್ಚರವಹಿಸಬೇಕೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ, ಶಾಸಕ ಎಸ್.ಸುರೇಶ್‌ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News