ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜೂ.8: ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಓಂಪ್ರಕಾಶ್ ಅವರನ್ನು ನೇಮಿಸಿರುವುದನ್ನು ಪ್ರಶ್ನಿಸಿ ಹಿರಿಯ ಪೊಲೀಸ್ ಅಧಿಕಾರಿ ಸುಶಾಂತ್ ಮಹಾಪಾತ್ರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಸುಶಾಂತ್ ಮಹಾಪಾತ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಯಂತ್ ಪಾಟೀಲ್ ಮತ್ತು ನ್ಯಾಯಮೂರ್ತಿ ಶ್ರೀನಿವಾಸ್‌ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇಮಕಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ಸರಕಾರಕ್ಕೆ ಸೂಚನೆ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಅರುಣ್ ಶ್ಯಾಮ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರಿಗಿಂತಲೂ ಸುಶಾಂತ್ ಮಹಾಪಾತ್ರ ಹಿರಿಯನಾದರೂ ರಾಜ್ಯ ಸರಕಾರ ಪ್ರಕಾಶ್‌ಸಿಂಗ್ ಬಾದಲ್ ಪ್ರಕರಣ ಹಾಗೂ ಸುಪ್ರೀಂಕೋರ್ಟ್‌ನ ಸೂಚನೆಗಳನ್ನು ಪಾಲಿಸದೇ ಡಿಜಿ ಹುದ್ದೆಗೆ 2015ರಲ್ಲಿ ನೇಮಕ ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಯುಪಿಎಸ್‌ಸಿ ಉನ್ನತ ಹುದ್ದೆಗಳಿಗೆ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವ ಸಂಬಂಧ ಕಮಿಟಿವೊಂದನ್ನು ರಚಿಸಿ ಹಿರಿಯ ಅಧಿಕಾರಿಗಳನ್ನು ಡಿಜಿ ಹುದ್ದೆಗೆ ನೇಮಕ ಮಾಡಬೇಕು. ಆದರೆ, ಇಲ್ಲಿಯವರೆಗೆ ಆ ಕಮಿಟಿಯನ್ನು ರಚಿಸಿಲ್ಲ. ಇದರಿಂದ, ಹುದ್ದೆಗಳ ನೇಮಕದಲ್ಲಿ ತಾರತಮ್ಯ ನಡೆದಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.