×
Ad

ಅಕ್ಷರ ದಾಸೋಹ ದಿನಸಿ ಸಾಮಗ್ರಿಗಳ ಕಳವು ಆರೋಪ

Update: 2016-06-08 22:58 IST

ಶಿವಮೊಗ್ಗ, ಜೂ. 8: ಕೆಎಸ್‌ಎಫ್‌ಸಿ ಗೋದಾಮಿನ ಮೂಲಕ ಕ್ಯಾಂಟರ್ ಲಾರಿಯಲ್ಲಿ ಶಾಲೆಗಳಿಗೆ ರವಾನೆಯಾಗುತ್ತಿದ್ದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ದಿನಸಿ ಸಾಮಗ್ರಿಗಳನ್ನು ಮಾರ್ಗಮಧ್ಯೆ ಕಳವು ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ, ಜಯನಗರ ಠಾಣೆ ಪೊಲೀಸರು ಕ್ಯಾಂಟರ್ ಲಾರಿ ವಶಕ್ಕೆ ಪಡೆದು ತಪಾಸಣೆ ನಡೆಸಿದ ಘಟನೆ ಬುಧವಾರ ಬೆಳಗ್ಗೆ ನಗರದಲ್ಲಿ ನಡೆದಿದೆ. ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಅಧಿಕಾರಿಗಳನ್ನು ಠಾಣೆಗೆ ಕರೆಯಿಸಿದ ಪೊಲೀಸರು, ಲಾರಿಯಲ್ಲಿದ್ದ ದಿನಸಿ ಸಾಮಗ್ರಿಗಳ ತೂಕ ನಡೆಸಿದ್ದಾರೆ. ಕೆಎಸ್‌ಎಫ್‌ಸಿ ಗೋದಾಮಿನಿಂದ ತರುವ ವೇಳೆ ಇದ್ದ ತೂಕದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲವೆಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲಾರಿ ಬಿಟ್ಟು ಕಳುಹಿಸಿದ್ದಾರೆ. ಏನಾಯಿತು?: ಸಾಗರ ರಸ್ತೆಯಲ್ಲಿರುವ ಕೆಎಸ್‌ಎಫ್‌ಸಿ ಗೋದಾಮಿನಿಂದ ಕ್ಯಾಂಟರ್ ಲಾರಿಯೊಂದರಲ್ಲಿ ಬಿಸಿಯೂಟ ತಯಾರಿಗೆ ಅಗತ್ಯವಾದ ಅಕ್ಕಿ, ಗೋಧಿ, ಬೇಳೆಕಾಳು, ಎಣ್ಣೆ, ಹಾಲಿನ ಪುಡಿ ಮತ್ತಿತರ ದಿನಸಿ ಸಾಮಗ್ರಿಗಳನ್ನು ಭರ್ತಿ ಮಾಡಿ ಕಳುಹಿಸಲಾಗಿತ್ತು. ಈ ಲಾರಿಯು ತಾಲೂಕಿನ ಗೋಂಧಿಚಟ್ನಳ್ಳಿ ಭಾಗದ ಶಾಲೆಗಳಿಗೆ ಸಾಮಗ್ರಿ ರವಾನಿಸಬೇಕಾಗಿತ್ತು. ಆದರೆ ಶಿವಮೂರ್ತಿ ವೃತ್ತದ ಬಳಿ ಲಾರಿ ನಿಂತುಕೊಂಡಿದ್ದಾಗ ಒಂದಿಬ್ಬರು ಚೀಲಗಳಲ್ಲಿದ್ದ ದಿನಸಿ ಸಾಮಗ್ರಿಗಳನ್ನು ಕದಿಯುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯ ಆಧಾರದ ಮೇಲೆ ಜಯನಗರ ಠಾಣೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಲಾರಿಯಲ್ಲಿದ್ದವರು ಚೀಲದಲ್ಲಿ ಸೋರುತ್ತಿದ್ದ ಅಕ್ಕಿಯನ್ನು ಸರಿಪಡಿಸುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸುವ ಉದ್ದೇಶದಿಂದ ಅಕ್ಷರ ದಾಸೋಹ ಯೋಜನೆಯ ಅಧಿಕಾರಿಗಳಿಗೆ ಪೊಲೀಸರು ಮಾಹಿತಿಯಿತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಸಹಾಯಕ ನಿರ್ದೇಶಕ ಧರ್ಮಪ್ಪ ಮೈಸೂರು ಹಾಗೂ ಇತರೆ ಅಧಿಕಾರಿಗಳು ಜಯನಗರ ಠಾಣೆಗೆ ಆಗಮಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಮತ್ತೊಮ್ಮೆ ದಿನಸಿ ಸಾಮಗ್ರಿಗಳ ತೂಕ ನಡೆಸಿದ್ದಾರೆ. ಕೆಎಸ್‌ಎಫ್‌ಸಿ ಗೋದಾಮಿನಿಂದ ರವಾನೆಯಾಗಿದ್ದ ದಿನಸಿ ಸಾಮಗ್ರಿಗಳ ತೂಕದಲ್ಲಿ ಯಾವುದೇ ವ್ಯತ್ಯಾಸ ಕಂಡುಬಾರದ ಹಿನ್ನೆಲೆಯಲ್ಲಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡ ಸಾಮಗ್ರಿಗಳು ಸಮರ್ಪಕವಾಗಿದೆ ಎಂದು ಬರೆದುಕೊಟ್ಟ ಲಿಖಿತ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಲಾರಿಯನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ: ಅಕ್ಷರ ದಾಸೋಹ ಯೋಜನೆಯಡಿ ಗೋದಾಮುಗಳಿಂದ ಶಾಲೆಗಳಿಗೆ ದಿನಸಿ ಸಾಮಗ್ರಿ ರವಾನೆ ಮಾಡಲು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡಲಾಗಿರುತ್ತದೆ. ಟೆಂಡರ್ ಪಡೆದವರು ಲಾರಿಗಳ ಮೂಲಕ ಶಾಲೆಗಳಿಗೆ ದಿನಸಿ ಸಾಮಗ್ರಿಗಳನ್ನು ರವಾನಿಸುತ್ತಾರೆ. ಈ ವೇಳೆ ದಿನಸಿ ಸಾಮಗ್ರಿಗಳ ಕಳವು ಮಾಡಲಾಗುತ್ತಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾಗಾಟದ ವೇಳೆ ಅಕ್ರಮವಾಗದಂತೆ ಸೂಕ್ತ ಎಚ್ಚರವಹಿಸಬೇಕು. ಸಾಮಗ್ರಿ ಕೊಂಡೊಯ್ಯುವ ಲಾರಿಯ ಜೊತೆಗೆ ಇಲಾಖೆಯ ಸಿಬ್ಬಂದಿಯನ್ನು ಕಳುಹಿಸಿ ಕೊಡಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರು ಸಲಹೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News