×
Ad

ಮಾನವ ಹಕ್ಕುಗಳು, ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ದೂರು

Update: 2016-06-08 22:59 IST

ಮಡಿಕೇರಿ, ಜೂ.8: ಸುದರ್ಶನ ಬಡಾವಣೆಯ ನಿವಾಸಿ ರಂಗಯ್ಯ ಎಂಬವರ ಪುತ್ರ ಸಂದೀಪ್ ಕುಮಾರ್ ಮೇಲೆ ಮಡಿಕೇರಿ ನಗರ ಠಾಣೆಯ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ ನಗರ ಠಾಣಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಮೇ 31 ರಂದು ಬಿಳಿಗೇರಿಯ ಕೆಲವು ಯುವಕರು ನಗರದ ಚೈನ್‌ಗೇಟ್ ಬಳಿ ಸಂದೀಪ್ ಕುಮಾರ್ ಜೊತೆ ಕಲಹ ನಡೆಸಿದ್ದು, ಈ ಬಗ್ಗೆ ದೂರು ನೀಡಲು ಬಂದಾತನ ಮೇಲೆಯೇ ಕೆಲವು ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗಳಿಂದ ಒಳ ರೋಗಿಯಾಗಿ ಸಂದೀಪ್ ಕುಮಾರ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಬಬ್ಬೀರ ಸರಸ್ವತಿ ಆರೋಪಿಸಿದ್ದಾರೆ.

ಪೊಲೀಸರ ನಿರ್ಲಕ್ಷದ ವಿರುದ್ಧ ಸಂಸ್ಥೆಗೆ ಬಂದ ದೂರಿನ ಹಿನ್ನೆಲೆ ನಗರ ಠಾಣಾಧಿಕಾರಿಗಳಿಗೆ ಲಿಖಿತ ದೂರನ್ನು ನೀಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಮುಂದಿನ ಎರಡು ದಿನಗಳೊಳಗೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಹಲ್ಲೆಗೊಳಗಾದ ಸಂದೀಪ್ ಕುಮಾರ್‌ಗೆ ನ್ಯಾಯ ಸಿಗದಿದ್ದಲ್ಲಿ ಸಂಸ್ಥೆಯ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ಸರಸ್ವತಿ ಎಚ್ಚರಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News