ಕುಡಿಯುವ ನೀರಿನ ಕುರಿತು ಪುರಸಭೆ ತುರ್ತು ಸಭೆ
ತರೀಕೆರೆ. ಜೂ.8: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪುರಸಭೆಯ ತುರ್ತು ಸಭೆ ಅಧ್ಯಕ್ಷ ಟಿ.ಟಿ.ನಾಗರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಜಿ.ಎಚ್.ಶ್ರೀನಿವಾಸ್, ಸರಕಾರ ಎಸ್ಸಿ ಮತ್ತು ಎಸ್ಟಿ ಫಲಾನುಭವಿಗಳಿಗೆ ವಸತಿ ಸೌಲಭ್ಯ ವಿತರಿಸಲು ಮುಂದಾಗಿದ್ದು, ಪುರಸಭೆಯು ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಲಿ. ಮನೆ ಕಟ್ಟಲು ತಾಂತ್ರಿಕ ಕಾರಣಗಳ ನೆಪ ನೀಡಿ ಸೌಲಭ್ಯ ತಿರಸ್ಕರಿಸದಂತೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಲ್ಲಿ ಮನವಿ ನೀಡಲಾಗುವುದು. ಪಟ್ಟಣದಲ್ಲಿ ನೀರು ಪೂರೈಕೆಗೆ ತೊಂದರೆ ಯಾಗದಂತೆ ಭದ್ರಾ ಡ್ಯಾಂನ ಕಾಮಗಾರಿ ತ್ವರಿತವಾಗಿ ಮಾಡಲು ಇಂಜಿನಿಯರನ್ನು ಕೋರಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಡಿ.ಪಿ. ಪದ್ಮರಾಜು ಮಾತನಾಡಿ, ಹಿಂದೆಯು ಡ್ಯಾಂ ದುರಸ್ತಿ ಕಾಮಗಾರಿ ನಡೆದಿದ್ದರೂ, ಈಗಿನಂತೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿರಲಿಲ್ಲ. ಅಧಿಕಾರಿಗಳು ನೀರು ಸಂಗ್ರಹಿಸುವಲ್ಲಿ ನಿರ್ಲಕ್ಷ್ಯ ತೋರಿದಂತಿದೆ. ಕೂಡಲೇ ಜಂಬದ ಹಳ್ಳದಿಂದ ಮಾನಸಿಕೆರೆಗೆ ನೀರು ತುಂಬಿಸಿ. ಕೆರೆಯ ಹೂಳನ್ನು ತೆಗೆಸಲು ಹಾಗೂ ಕೆರೆಯ ಸುತ್ತ ಗೋಡೆ ನಿರ್ಮಿಸಲು ವಿಶೇಷ ಪ್ಯಾಕೇಜ್‌ನಲ್ಲಿ ಹಣ ನಿಗದಿ ಮಾಡಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಭದ್ರಾ ಅಣೆಕಟ್ಟಿನ ಇಂಜಿನಿಯರ್ ವೆಂಕಟೇಶ್‌ಮಾತನಾಡಿ, 12ದಿನಗಳಲ್ಲಿ ಕೆಲಸ ಮುಗಿಯಲಿದ್ದು, ನೀರು ಪೂರೈಕೆ ಎಂದಿನಂತೆಯೇ ಮುಂದುವರಿಯಲಿದೆ ಎಂದರು.
ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜು ಮಾತನಾಡಿ, ಸಂಗ್ರಹ ನೀರು ಕಡಿಮೆಯಾಗುತ್ತಿರುವ ಕಾರಣ 5ದಿನಕ್ಕೊಮ್ಮೆ ಅಧರ್ ಗಂಟೆ ನೀರು ಪೂರೈಸಿ, ಬೋರ್‌ವೆಲ್ ನೀರು ಬಳಕೆಗೆ ಜನರಿಗೆ ಮಾಹಿತಿ ನೀಡಿ. ಮಳೆ ಬರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ಕೂಡಲೇ ಪರ್ಯಾಯ ಕ್ರಮ ಕೈಗೊಳ್ಳಲು ಸೂಚಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭೆ ಅಧ್ಯಕ್ಷ ಎಂ.ನಾಗರಾಜು, ಸ್ವಚ್ಛ ಭಾರತ್ ಅಭಿಯಾನದಲ್ಲಿ ಶೌಚಾಲಯ ನಿರ್ಮಿಸಿಕೊಂಡವರಿಗೆ ಹಣ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆಕ್ಷೇಪಿಸುತ್ತಿದ್ದಂತೆ ಸದಸ್ಯ ಕೃಷ್ಣ ಅಧಿಕಾರಿ ಶೌಚಾಲಯಕ್ಕೆ ಬೋರ್ಡ್ ಹಾಕಲು 300 ರೂ. ಲಂಚ ಕೇಳಿದ್ದಾರೆ. ಈ ಬಗ್ಗೆ ಜನತೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಟಿ.ಟಿ. ನಾಗರಾಜು, ಮಾಜಿ ಉಪಾದ್ಯಕ್ಷೆ ಪುಟ್ಟಮ್ಮ, ಮಾಜಿ ಅಧ್ಯಕ್ಷ ಪ್ರಕಾಶ್‌ವರ್ಮಾ, ಸುನೀಲ್ ದತ್ತು, ಟಿ.ಎಸ್.ರಮೇಶ್, ಉಪಾಧ್ಯಕ್ಷೆ ಅನ್ನಪೂರ್ಣಾ,ಮುಖ್ಯಾಧಿಕಾರಿ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು