×
Ad

ಶಿವಮೊಗ್ಗದಲ್ಲಿಯೇ ಪರೀಕ್ಷಾ ಕೇಂದ್ರ ಸ್ಥಾಪನೆ

Update: 2016-06-08 23:11 IST

ಶಿವಮೊಗ್ಗ, ಜೂ. 8: ಸರಕಾರವು ರಾಜ್ಯ ಸರಕಾರಿ ನೌಕರರಿಗೆ ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದು, ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯವಾಗಿ ನಿಗದಿಪಡಿಸಿದ ಅವಧಿಯಲ್ಲಿ ಉತ್ತೀರ್ಣರಾಗಬೇಕಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ನೌಕರರಿಗೆ ಮುಂಭಡ್ತಿ, ವಾರ್ಷಿಕ ವೇತನ ಭಡ್ತಿ, ಖಾಯಂ ಸೇವಾ ಪೂರ್ವ ಅವಧಿಯನ್ನು ಘೋಷಿಸುವುದನ್ನು ತಡೆಹಿಡಿಯಲಾಗುವುದು. ಆದ್ದರಿಂದ ಎಲ್ಲಾ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಉತ್ತೀರ್ಣರಾಗುವುದು ತುರ್ತು ಅಗತ್ಯವಿದೆ.    ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲು ದೂರದ ಬೆಂಗಳೂರಿಗೆ ಹೋಗಬೇಕಾಗಿತ್ತು. ಇದರಿಂದ ನೌಕರರಿಗೆ ಆರ್ಥಿಕವಾಗಿ ಮತ್ತು ದೈಹಿಕವಾಗಿ ಪ್ರಯಾಸ ಪಡಬೇಕಾಗಿತ್ತು ಅಲ್ಲದೇ, ಸಮಯಾವಕಾಶ ಕಲ್ಪಿಸಿಕೊಳ್ಳಲು ಯೋಚಿಸುವಂತಾಗಿತ್ತು. ಈ ಸಮಸ್ಯೆಯನ್ನರಿತ ಜಿಲ್ಲಾ ಸಂಘವು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಶಿವಮೊಗ್ಗ ನಗರದಲ್ಲಿ ಪರೀಕ್ಷಾ ಕೇಂದ್ರವನ್ನು ಆರಂಭಿಸಲು ಮನವಿ ಸಲ್ಲಿಸಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕರು ಜೂ. 3ರಿಂದ ಅನ್ವಯವಾಗುವಂತೆ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜನಲ್ಲಿ ಪರೀಕ್ಷಾ ಕೇಂದ್ರವನ್ನು ಆರಂಭಿಸಲು ಅನುಮತಿ ನೀಡಿದ್ದಾರೆ. ಇದರಿಂದಾಗಿ ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಕಾರವಾರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸರಕಾರಿ ನೌಕರರಿಗೆ ಅನುಕೂಲವಾಗಲಿದೆ. ಈ ಪರೀಕ್ಷಾ ಕೇಂದ್ರವನ್ನು ಆರಂಭಗೊಳಿಸಲು ಸಹಕರಿಸಿದ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಕಿಯೋನಿಕ್ಸ್ ಸಂಸ್ಥೆಯ ವ್ಯವಸ್ಥಾಪಕರಿಗೆ ಜಿಲ್ಲಾ ಸರಕಾರಿ ನೌಕರರ ಸಂಘವು ಅಭಿನಂದಿಸುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ್‌ಕುಮಾರ್ ಅವರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News