×
Ad

ಜಿಲ್ಲಾಡಳಿತದಿಂದ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ: ರವಿ ಡಿ. ಚೆನ್ನಣ್ಣನವರ್

Update: 2016-06-08 23:12 IST

ಶಿವಮೊಗ್ಗ, ಜೂ. 8: ತಿಂಗಳುಗಳ ಹಿಂದೆ ಜಿಲ್ಲಾಡಳಿತ ಏರ್ಪಡಿಸಿದ್ದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ ಪರೀಕ್ಷೆಯ ತರಬೇತಿ ಕಾರ್ಯಾಗಾರಕ್ಕೆ ವ್ಯಕ್ತವಾದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಹಾಗೂ ಪದವೀಧರರ ಮನವಿಯ ಹಿನ್ನೆಲೆಯಲ್ಲಿ, ಇದೀಗ ಜಿಲ್ಲಾಡಳಿತವು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರ ಆಯೋಜಿಸಲು ನಿರ್ಧರಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.

ಜೂ. 10ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಬೆಳಗ್ಗೆ 11:30 ರಿಂದ ಸಂಜೆ 4:30 ರವರೆಗೆ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದ್ದಾರೆ. ಐಎಎಸ್, ಐಪಿಎಸ್, ಐಆರ್‌ಎಸ್, ಕೆಎಎಸ್ ಅಧಿಕಾರಿ ಗಳು ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನ ಎದುರಿಸುವುದು ಹೇಗೆ ಎಂಬುವುದರ ಬಗ್ಗೆ ತರಬೇತಿ ನೀಡಲಿದ್ದಾರೆ. ಪದವೀಧರ ಯುವಕ-ಯುವತಿಯರು ಈ ಕಾರ್ಯಾಗಾರಕ್ಕೆ ಆಗಮಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಾರ್ಯಾಗಾರದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಎಸ್ಪಿ ರವಿ ಡಿ. ಚೆನ್ನಣ್ಣನವರ್, ಜಿಪಂ ಸಿಇಒ ಕೆ. ರಾಕೇಶ್‌ಕುಮಾರ್, ಸಾಗರ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ನಿಶಾಜೇಮ್ಸ್, ಪ್ರೊಬೆಷನರಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಮುಹಮ್ಮದ್ ಸುಜೀತಾ, ರಾಯಚೂರು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ದಾವಣಗೆರೆ ಎಸ್.ಪಿ. ಭೀಮಾಶಂಕರ್ ಎಸ್. ಗುಳೇದ್, ಬೆಂಗಳೂರಿನ ಆದಾಯ ತೆರಿಗೆ (ಐಆರ್‌ಎಸ್) ವಿಭಾಗದ ಅಧಿಕಾರಿ ಗುರುರಾಜ್, ಪುತ್ತೂರು ಉಪ ವಿಭಾಗಾಧಿಕಾರಿ ರಾಜೇಂದ್ರ (ಕೆಎಎಸ್) ರವರು ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ತರಬೇತಿ ಕಾರ್ಯಾಗಾರಕ್ಕೆ ಆಗಮಿಸಲು ಇಚ್ಛಿಸುವ ಪದವೀಧರರು ಎಸ್‌ಪಿ ಕಚೇರಿಯ ಸ್ವಾಗತಕಾರರ ಬಳಿ ಅಥವಾ ಜಿಲ್ಲಾ ಅಪರಾಧ ದಾಖಲಾತಿ ವಿಭಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಚೆನ್ನಣ್ಣನವರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News