×
Ad

ಸಾಧಿಸುವ ಛಲವಿದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ: :ಡಾ. ಲಿಂಗರಾಜ ನಾಯ್ಕ

Update: 2016-06-08 23:15 IST

ಸಾಗರ, ಜೂ.8: ವ್ಯಕ್ತಿಗೆ ಸಾಧಿಸುವ ಛಲವಿದ್ದಾಗ ಮಾಧ್ಯಮ ಯಾವುದಾದರೂ ಉನ್ನತ ಫಲಿತಾಂಶ ಪಡೆಯಲು ಅಡ್ಡಿಯಾಗುವುದಿಲ್ಲ. ನಾನು ಸಹ ಕನ್ನಡ ಮಾಧ್ಯಮದಲ್ಲಿ ಓದಿ ಬೆಳೆದ ವಿದ್ಯಾರ್ಥಿ. ಕನ್ನಡ ಮಾಧ್ಯಮದಲ್ಲಿ ಓದಿದರೂ ಐಎಎಸ್ ನಂತಹ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ನಾಗರಿಕ ಸೇವಾ ಪರೀಕ್ಷೆಯಲ್ಲಿ 922 ರ್ಯಾಂಕ್ ಪಡೆದಿರುವ ಡಾ. ಲಿಂಗರಾಜ ನಾಯ್ಕ ಹೇಳಿದರು.

ತಾಲೂಕಿನ ಸಿರವಂತೆಯ ಚಿತ್ರಸಿರಿ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ಸಿರವಂತೆ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಬಡತನ, ನನ್ನ ಊರಿನ ಪರಿಸ್ಥಿತಿ ವಿದ್ಯಾಭ್ಯಾಸಕ್ಕೆ ನನಗೆ ಅಡ್ಡಿ ಉಂಟು ಮಾಡಿಲ್ಲ. ಸೊರಬ ತಾಲೂಕು ಹಿರೇಮಾಗಡಿ ತಾಂಡಾದಲ್ಲಿ ಆರಂಭದ ಶಿಕ್ಷಣ ಪಡೆದ ನಾನು, ಸಾಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದದ್ದು, ನನ್ನ ಬದುಕಿನ ವಿಶಾಲತೆಯನ್ನು ಹೆಚ್ಚಿಸಿತು. ವಿದ್ಯಾರ್ಥಿಗಳಲ್ಲಿ ಓದಿನ ಹಸಿವಿನ ಜೊತೆ ನಿರಂತರ ಪ್ರುತ್ನ ಇದ್ದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದರು.

ಅಂಕ ಕಡಿಮೆ ಬಂದಿದೆ ಎಂದು ವಿದ್ಯಾ ರ್ಥಿಗಳು ಆತಂಕಗೊಳ್ಳುವ ಅಗತ್ಯ ವಿಲ್ಲ. ವ್ಯಕ್ತಿತ್ವ ರೂಪುಗೊಂಡರೆ ಅಂಕ ಬದುಕಿಗೆ ಮಾನ ದಂಡವಾಗುವುದಿಲ್ಲ. ನಾನು ಪ್ರೌಢಶಾಲೆಯಲ್ಲಿ ಕನಿಷ್ಠ ಅಂಕ ಪಡೆದಿದ್ದರೂ, ಐಎಎಸ್‌ನಂತಹ ಪರೀಕ್ಷೆ ಎದುರಿಸಿ, ಯಶಸ್ವಿಯಾಗಿದ್ದೇನೆ. ನಮ್ಮ ನೈತಿಕಸ್ಥೈರ್ಯ, ಆತ್ಮಾಭಿಮಾನವಿದ್ದರೆ ಎಂತಹ ಹುದ್ದೆಯನ್ನಾದರೂ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ವ್ಯಕ್ತಿಗೆ ವಿದ್ಯೆ ಭೂಷಣ. ಕೀಳರಿಮೆ ತೊರೆದು ಸಾಧಿಸುವ ಛಲವೊಂದಿದ್ದರೆ ಉನ್ನತ ವಿದ್ಯೆ ಪಡೆಯಬಹುದು. ಡಾ. ಲಿಂಗರಾಜ ನಾಯ್ಕ ಅವರು ಬಡತನವನ್ನು ಮೆಟ್ಟಿ ನಿಂತು ಉನ್ನತ ಪರೀಕ್ಷೆಯನ್ನು ಪಾಸ್ ಮಾಡಿದ್ದು ಯುವಜನರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ಇದೆೇ ಸಂದರ್ಭದಲ್ಲಿ ಬೆಳಗಾವಿ ಸಿಂದ್ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯ ನಿರ್ದೇಶಕ ಡಿ.ರಾಮಪ್ಪ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಗಾಳಿಪುರ, ತಾಪಂ ಸದಸ್ಯ ಅಶೋಕ್ ಬರದವಳ್ಳಿ ಉಪಸ್ಥಿತರಿದ್ದರು. ಪೂರ್ಣಿಮಾ ಪರಮೇಶ್ವರ್ ಪ್ರಾರ್ಥಿಸಿದರು. ಸಿರವಂತೆ ಚಂದ್ರಶೇಖರ್ ಸ್ವಾಗತಿಸಿದರು. ಪಲ್ಲವಿ ಬರದವಳ್ಳಿ ವಂದಿಸಿದರು. ಪರಮೇಶ್ವರ್ ಕರೂರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News