ಸೆಪ್ಟಂಬರ್‌ನಲ್ಲಿ ಜೋಗಿ ಸಮಾವೇಶ
ಸಾಗರ, ಜೂ.8: ಸಂಪ್ರದಾಯ ಬದ್ಧ್ದ ಜನಪದ ಕಲಾಪ್ರಕಾರ ವಾಗಿರುವ ಜೋಗಿ ಜನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆನಂದಪುರಂನಲ್ಲಿ ಸೆಪ್ಟಂಬರ್ 2ನೆ ವಾರ ರಾಜ್ಯ ಮಟ್ಟದ ಕಿನ್ನರಿ ಜೋಗಿ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಕನ್ನಡ ಜನಪದ ಪರಿಷತ್‌ನ ರಾಜ್ಯ ಕಾರ್ಯಾಧ್ಯಕ್ಷ ಡಾ. ಬಾಲಾಜಿ ಹೇಳಿದರು. ಇಲ್ಲಿನ ಗಾಂಧಿನಗರದಲ್ಲಿ ಇತ್ತೀಚೆಗೆ ಕನ್ನಡ ಜನಪದ ಪರಿಷತ್ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಾಹಿತಿ ಡಾ. ನಾ.ಡಿಸೋಜ ಅವರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದ 12 ಜಿಲ್ಲೆಗಳಲ್ಲಿ ಜೋಗಿ ಜನಾಂಗದವರು ಇದ್ದಾರೆ. ಈ ತನಕ ಅವರ ಕಲೆಯನ್ನು ಗುರುತಿಸುವ ಕೆಲಸ ಸರಕಾರದಿಂದ ಆಗಿಲ್ಲ. ಜೋಗಿ ಜನಾಂಗದವರಿಗೆ ಸೂಕ್ತ ಮೀಸಲಾತಿ ಒದಗಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಕಿನ್ನರಿ ಜೋಗಿ ಜನಪದ ಕಲೆಯನ್ನು ಪುನರ್ ಪ್ರತಿಷ್ಠಾಪಿಸಿ, ಜನಮಾನಸದಲ್ಲಿ ನೆಲೆಯೂರುವಂತೆ ಮಾಡುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಸಮಾವೇಶವನ್ನು ಜನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದು, ಸರಕಾರ ಸೂಕ್ತ ಧನಸಹಾಯ ಕಲ್ಪಿಸಬೇಕು ಎಂದು ತಿಳಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ನಾ.ಡಿಸೋಜ ,ಕಿನ್ನರಿ ಜನಪದ ಕಲೆ ವಿಶಿಷ್ಟವಾದದ್ದು. ಅದನ್ನು ಗುರುತಿಸುವ ಕೆಲಸ ಈ ತನಕ ಪರಿಣಾಮಕಾರಿಯಾಗಿ ನಡೆದಿಲ್ಲ. ಇಲ್ಲಿಯವರೆಗೆ ಜೋಗಿ ಜನಪದ ಕಲೆಗಳ ಸಮಾವೇಶ ಎಲ್ಲಿಯೂ ನಡೆದಿಲ್ಲ. ಈ ಪ್ರಯತ್ನವನ್ನು ಜನಪದ ಕಲಾ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಜನಪದ ಅಕಾಡಮಿ ಸದಸ್ಯರಾದ ಡಾ. ಆನಂದಪ್ಪ ಜೋಗಿ, ಶೃತಿ, ದೇವೇಂದ್ರ ಬೆಳೆಯೂರು, ಶಿವಾನಂದ ಕುಗ್ವೆ, ಷಣ್ಮುಖ, ಗುಡ್ಡಪ್ಪ ಜೋಗಿ, ಕಸ್ತೂರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.