ಆಶ್ರಯ ನಿವೇಶನ ಮಂಜೂರಾತಿಗೆ ಆಗ್ರಹಿಸಿ ಡಿಎಸ್ಸೆಸ್ ಧರಣಿ
ಶಿವಮೊಗ್ಗ, ಜೂ.8: ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿ ಮಂಗೊಟೆ ಗ್ರಾಮದಲ್ಲಿರುವ ನಿವೇಶನರಹಿತ ದಲಿತರಿಗೆ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು. ಗ್ರಾಮದ ಸರ್ವೇ ನಂಬರ್ 107 ರಲ್ಲಿ 2 ಎಕರೆ ಸರಕಾರಿ ಜಾಗ
ವಿದ್ದು, ಆಶ್ರಯ ಯೋಜನೆಯಡಿ ನಿವೇಶನರಹಿತ ದಲಿತರಿಗೆ ನಿವೇಶನ ಮಂಜೂರು ಮಾಡುವ ಮೂಲಕ ಸೂರು ಒದಗಿಸಬೇಕು ಎಂದು ಧರಣಿನಿರತರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಹರಿಜನ, ಛಲವಾದಿ, ಕೊರಮ, ಬೆಸ್ತ, ಮಡಿವಾಳ ಮತ್ತು ಮರಾಠ ಜನಾಂಗಕ್ಕೆ ಸೇರಿದ ಬಡವರು ಕಳೆದ 35 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಬಹುತೇಕ ಮನೆಗಳು ದುಸ್ಥಿತಿಯಲ್ಲಿವೆ. ಮಳೆಗಾಲ ಬಂತೆಂದರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಹೊಳೆಯ ಪ್ರವಾಹ ಹೆಚ್ಚಾದಾಗ ಇಕ್ಕೆಲಗಳಲ್ಲಿನ ದಂಡೆಯು ಪ್ರತೀ ವರ್ಷ ಕುಸಿಯುತ್ತಿದೆ. ದಂಡೆಗೆ ಹೊಂದಿಕೊಂಡಂತೆ ಇರುವ ಮನೆಗಳು ಕುಸಿದು ಬೀಳುವ ಸಂಭವ ಹೆಚ್ಚಾಗಿದ್ದು, ಆಸ್ತಿಹಾನಿ ಜೊತೆಗೆ ಜೀವಹಾನಿ ಉಂಟಾಗುವ ಭೀತಿಯಿದೆ ಎಂದು ಧರಣಿನಿರತರು ತಿಳಿಸಿದ್ದಾರೆ. ಗ್ರಾಮದಲ್ಲಿರುವ ಸರಕಾರಿ ಜಮೀನು ಸರ್ವೇ ಮಾಡಿ
, ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ ನೀಡಿ, ನಿವಾಸಿಗಳನ್ನು ಸ್ಥಳಾಂತರಿಸಬೇಕೆಂದು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಧರಣಿನಿರತರು ದೂರಿದರು. ಗ್ರಾಮ ಹಾಗೂ ತಾಲೂಕು ಆಡಳಿತ, ದಾಖಲೆ ಸಿದ್ಧ್ದಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುವುದಾಗಿ ಹೇಳುತ್ತಾ ಬಡ ಜನರನ್ನು ವಂಚಿಸುತ್ತಿದೆೆ. ಈಗಾಗಲೇ ತಾಲೂಕು ಸರ್ವೇಯರ್ ಜಮೀನನ್ನು ಅಳತೆ ಮಾಡಿ ನಕ್ಷೆ ತಯಾರಿಸಿದ್ದಾರೆ. ಆದರೆ ಅದನ್ನು ದೃಢೀಕರಿಸಿಲ್ಲ. ಅಲ್ಲದೇ ಗ್ರಾಪಂನವರು ಸಿದ್ಧಪಡಿಸಿರುವ ನಿವೇಶನರಹಿತರ ಪಟ್ಟಿಯನ್ನು ಭದ್ರಾವತಿ ತಾಪಂ ಇಓ ಅನುಮೋದನೆ ನೀಡಿರುವುದಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ. ಕೂಡಲೇ ಸರಕಾರಿ ಜಾಗದಲ್ಲಿ ನಿವೇಶನರಹಿತ ಬಡವರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು. ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿರುವುದಾಗಿ ಸುಳ್ಳು ಹೇಳುತ್ತಿರುವ ಗ್ರಾಪಂ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧ್ದಿ ಅಧಿಕಾರಿ, ತಾಲೂಕು ಸರ್ವೇಯರ್ ಹಾಗೂ ಭದ್ರಾವತಿ ತಾಪಂ ಕಾರ್ಯನಿರ್ವಹಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕೆಂದು ಧರಣಿನಿರತರು ಆಗ್ರಹಿಸಿದ್ದಾರೆ. ಧರಣಿಯಲ್ಲಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಎಸ್.ಗುರುಮೂರ್ತಿ, ಪ್ರಮುಖರಾದ ಬೊಮ್ಮನಕಟ್ಟೆ ಕೃಷ್ಣ, ಟಿ.ಎಚ್. ಹಾಲೇಶಪ್ಪ, ಮಲ್ಲೇಶಪ್ಪ, ಸೂಗೂರು ಪರಮೇಶ್, ಹರಿಗೆ ರವಿ, ನಿದಿಗೆ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.