ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಮನುಕುಲದ ನಾಶ ಸನ್ನಿಹಿತ: ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ
ಶಿವಮೊಗ್ಗ, ಜೂ.8: ಪರಿಸರ ಸಂರಕ್ಷಣೆಗೆ ಮುಂದಾಗದಿದ್ದರೆ ಮನುಕುಲದ ನಾಶ ಸನ್ನಿಹಿತವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧ್ಯಯನ ಕೇಂದ್ರ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವಪರಿಸರ ದಿನಾಚರಣೆ ಹಾಗೂ ಪರಿಸರ ಮಿತ್ರ ಶಾಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸದಾ ಸಸ್ಯಶ್ಯಾಮಲೆಯಾಗಿದ್ದ ಮಲೆನಾಡು ತನ್ನ ಅಸ್ಮಿತತೆಯನ್ನು ಕಳೆದುಕೊಳ್ಳುತ್ತಿದೆ. ಸದಾ ಮಳೆಯಿಂದ ತೊಯ್ದು ಹೋಗುತ್ತಿದ್ದ ಮಲೆನಾಡಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವುದು, ಜಲಮೂಲಗಳಲ್ಲಿ ನೀರಿಲ್ಲದಿರುವುದು ವಿಪರ್ಯಾಸದ ಸಂಗತಿ ಎಂದವರು ನುಡಿದರು.
ನಗರೀಕರಣದ ಧಾವಂತದಲ್ಲಿ ನಿತ್ಯವೂ ನವನವೀನ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿ ಪರಿಸರದ ಕಾಳಜಿ ಮರೆತಿದ್ದೇವೆ. ಮನೆಯ ಸುತ್ತಮುತ್ತಲು ಪ್ಲಾಸ್ಟಿಕ್‌ನಂತಹ ಕೃತಕ ಗಿಡಗಳನ್ನು ಇಟ್ಟುಕೊಂಡು ಸಂಭ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದ ಅವರು, ಜಗತ್ತನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ, ಸಮಗ್ರವಾಗಿ ವೀಕ್ಷಿಸುವ ತುರ್ತು ಅಗತ್ಯವಿದೆ ಎಂದರು.
ಅರಣ್ಯವನ್ನು ಎಗ್ಗಿಲ್ಲದೆ ನಾಶಪಡಿಸುತ್ತಿದ್ದೇವೆ. ತಾಪಮಾನ ಹೆಚ್ಚಳದಿಂದ ಸಮುದ್ರದ ತಳದ ನೀರಿನಲ್ಲೂ ತಾಪಮಾನ ಹೆಚ್ಚಳ ಕಾಣುತ್ತಿದ್ದೇವೆ. ಇದರಿಂದಾಗಿ ಸಮುದ್ರದ ತಳದ ಹವಳದ ದಂಡೆಗಳ ಸ್ವರೂಪ ಕಳೆದುಹೋಗುತ್ತಿದೆ. ಇದು ಜಲಚರಗಳ ಸಂತತಿ ವಿನಾಶಕ್ಕೆ ಕಾರಣವಾಗುತ್ತಿದೆ ಎಂದವರು ನುಡಿದರು.
ಏರುತ್ತಿರುವ ಜಾಗತಿಕ ತಾಪಮಾನದಿಂದ ಕಡಲ ತೀರದ ಪ್ರದೇಶಗಳು, ಹಿಮಾಲಯ ಪರ್ವತ ಪ್ರದೇಶಗಳು ಆಪತ್ತಿನಲ್ಲಿವೆ. ಪ್ರಸ್ತುತ ಸಂದರ್ಭದಲ್ಲಿ ವಿಶ್ವದಲ್ಲಿ ವಾಸಿಸುವ ಎಲ್ಲರೂ ಜಟಿಲವಾದ, ಗೊಂದಲಮಯವಾದ ವಾತಾವರಣದಲ್ಲಿದ್ದೇವೆ ಎಂದ ಅವರು, ಅನೇಕ ಬೇಕುಗಳ ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು, ಸವಲತ್ತುಗಳನ್ನು ಪಡೆಯಲು ಶ್ರಮಿಸುವಂತಾಗಿದೆ ಎಂದವರು ನುಡಿದರು.
ಪರಿಸರ ಸಂರಕ್ಷಣೆ, ತಾಪಮಾನ ನಿಯಂತ್ರಣ ಮತ್ತು ಮಾಲಿನ್ಯ ತಡೆಯಂತಹ ಕಾರ್ಯವಿಧಾನಗಳ ಅನುಸರಣೆಯಿಂದ ಎಲ್ಲಾ ಜೀವಿಗಳು ಸಮನ್ವಯತೆಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ಆದರೆ ಇಂತಹ ವಿಷಯಗಳಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ ಎಂದರು.
ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ. ವನ್ಯಜೀವಿಗಳ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ನಾರಾಯಣಗೌಡ, ಡಯಟ್ ಪ್ರಾಂಶುಪಾಲ ಜಿ.ಎಸ್.ಪ್ರಭುಸ್ವಾಮಿ, ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಎ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಡಾ.ಜಿ.ಮಧು, ಡಾ.ಹನುಮಂತಪ್ಪ, ಎಂ.ಸಿ.ರಮೇಶ್, ಜಿ.ಎಲ್.ಜನಾದರ್ನ ಮುಂತಾದ ಗಣ್ಯರು ಉಪಸ್ಥಿತರಿದ್ದರು.