×
Ad

ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಮನವಿ

Update: 2016-06-08 23:19 IST

ಶಿವಮೊಗ್ಗ, ಜೂ. 8: ಯಾವುದೇ ಕಾರಣಕ್ಕೂ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈಯವರು ನೀಡಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಬಾರದು. ಅವರು ರಾಜೀನಾಮೆ ನೀಡಲು ಕಾರಣರಾದವರ ವಿರುದ್ಧ ಕ್ರಮ ಜರಗಿಸಲು ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಗೌಡಸಾರಸ್ವತ ಸಮಾಜವು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಅನುಪಮಾ ಶೆಣೈ ಓರ್ವ ದಕ್ಷ ಹಾಗೂ ಪ್ರಾಮಾಣಿಕ ಯುವ ಪೊಲೀಸ್ ಅಧಿಕಾರಿಯಾಗಿದ್ದರು. ಅವರು ತಮ್ಮ ನೇರ, ನಿರ್ಬಿಡ ಕಾರ್ಯನಿರ್ವಹಣೆಯ ಮೂಲಕ ಜನಮಾನಸದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಆದರೆ ಕರ್ತವ್ಯ ನಿರ್ವಹಣೆಯಲ್ಲಿ ಎದುರಾದ ರಾಜಕೀಯ ಒತ್ತಡಗಳಿಗೆ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಗೌಡಸಾರಸ್ವತ ಸಮಾಜವು ತಿಳಿಸಿದೆ. ಪ್ರಾಮಾಣಿಕ ಅಧಿಕಾರಿಯ ರಾಜೀನಾಮೆಯಿಂದ ಮಹಿಳೆಯರು ಸರಕಾರಿ ಸೇವೆಗೆ ಸೇರಲು ಹಿಂಜರಿಯುವಂತೆ ತಪ್ಪು ಸಂದೇಶವನ್ನು ರವಾನಿಸಿದಂತಾಗಿದೆ. ಅಲ್ಲದೇ ದಕ್ಷ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಅನುಪಮಾ ಶೆಣೈ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಜೊತೆಗೆ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ. ಈ ಸಂದಭರ್ದಲ್ಲಿ ಸಮಾಜದ ಪ್ರಮುಖರಾದ ಭಾಸ್ಕರ್ ಜಿ. ಕಾಮತ್, ದೇವದಾಸ್ ನಾಯಕ್, ಹೃಷಿಕೇಶ್ ಪೈ, ಪದ್ಮನಾಬ್, ಪ್ರಭಾಕರ್, ಶ್ರೀಕಾಂತ್ ಕಾಮತ್, ಪ್ರತಿಮಾ, ಶೋಭಾ, ರಾಧಾಬಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News