ಹಾಸನ: ಕರವೇ ವತಿಯಿಂದ 2 ಸಾವಿರ ಗಿಡ ನೆಡುವ ಕಾರ್ಯಕ್ರಮ
ಹಾಸನ, ಜೂ.9: ಎರಡು ಸಾವಿರ ಗಿಡ ನೆಡುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕ್ರಮಕ್ಕೆ ಶ್ರೀ ಆದಿಚುಂಚನಗಿರ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಚಾಲನೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 50ನೆ ಹುಟ್ಟುಹಬ್ಬದ ಅಂಗವಾಗಿ ಗುರುವಾರ ನಗರದ ಹೊರವಲಯ ಕೈಗಾರಿಕ ಪ್ರದೇಶ ಕೆ. ಹೊಸಕೊಪ್ಪಲುನಲ್ಲಿರುವ ಜ್ಞಾನಗುರುಕುಲ ಶಾಲೆ ಆವರಣದಲ್ಲಿ ಕರವೇ ಕಾರ್ಯಕರ್ತರು ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ಪೂಜೆ ಸಲ್ಲಿಸಿ ನಂತರ ಶಾಸ್ತ್ರೋಕ್ತವಾಗಿ ನೆಡಲಾಯಿತು.
ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾತನಾಡಿ, ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 50ನೆ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 50 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳು ಸೇರಿ ಎರಡು ಸಾವಿರ ಸಸಿಗಳನ್ನು ನೆಡಲಾಗುವುದು ಎಂದರು.
ಮಳೆ ಕಡಿಮೆಯಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ಇದಕ್ಕೆ ಮುಖ್ಯವಾಗಿ ಗಿಡ ಮರಗಳ ನಾಶವೇ ಕಾರಣವಾಗಿದೆ. ರಾಜ್ಯಾಧ್ಯಕ್ಷರ ಹುಟ್ಟಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ರಕ್ತದಾನ ಸೇರಿದಂತೆ ನಾನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಮಳೆ ಬಂದು ಕೆರೆ ಕಟ್ಟೆಗಳು ತುಂಬಲಿ ಎಂಬ ಹಿತಾದೃಷ್ಠಿಯಲ್ಲಿ ಗಿಡವನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಬೋರೇಗೌಡ, ನಗರಾಧ್ಯಕ್ಷ ಶಿವು, ಜಿಲ್ಲಾ ವಕ್ತಾರ ರಾಜೇಂದ್ರ ದೊಡ್ಡಮಗ್ಗೆ, ಮಾಧ್ಯಮ ವಕ್ತಾರ ಸೀತಾರಾಮು, ತಾಲೂಕು ಅಧ್ಯಕ್ಷ ಜಗನ್ನಾಥ್, ಮಹಿಳಾ ಘಟಕದ ಅಧ್ಯಕ್ಷೆ ಸರೋಜ, ತಾಲೂಕು ಅಧ್ಯಕ್ಷೆ ರೇಖಾ ಮಂಜುನಾಥ್, ನಗರಾಧ್ಯಕ್ಷೆ ವಿಜಯಲಕ್ಷ್ಮಿ, ಜ್ಞಾನ ಗುರುಕುಲ ಶಾಲೆಯ ಡಿ. ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.