×
Ad

ರಾವ್ ಬಹದ್ದೂರ್ ರಾಯ್ ಕ್ಷಮೆಯಾಚಿಸಲಿ: ಬರಗೂರು ಒತ್ತಾಯ

Update: 2016-06-09 22:57 IST

ಬೆಂಗಳೂರು, ಜೂ. 9: ಸಂವಿಧಾನ ಬರೆದದ್ದು ಡಾ.ಅಂಬೇಡ್ಕರ್ ಅಲ್ಲ ಎಂದು ವಿವಾದಿತ ಹೇಳಿಕೆ ನೀಡಿರುವ ಎಬಿವಿಪಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ(ಐಜಿಎನ್‌ಸಿಐ) ಅಧ್ಯಕ್ಷ ರಾವ್ ಬಹದ್ದೂರ್ ರಾಯ್ ಈ ಕೂಡಲೇ ಕ್ಷಮೆಯಾಚಿಸುವ ಜೊತೆಗೆ ಸಂವಿಧಾನ ಬರೆದದ್ದು ಯಾರು ಎಂಬುದನ್ನು ಸಾಬೀತು ಪಡಿಸಲಿ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಕಬ್ಬನ್‌ಪಾರ್ಕ್‌ನಲ್ಲಿರುವ ಎನ್‌ಜಿಒ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ, ಪ್ರೊ.ಬಿ.ಕೃಷ್ಣಪ್ಪ ಅವರ 78ನೆ ಜನ್ಮದಿನ ಹಾಗೂ ಸದಸ್ಯತ್ವ ಸಮರ್ಪಣಾ ದಿನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

 ಇತ್ತೀಚಿಗೆ ಐಜಿಎನ್‌ಸಿಎ ಅಧ್ಯಕ್ಷ ರಾಯ್ ಬಹದ್ದೂರ್ ರಾಯ್ ಎಂಬುವರು ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ. ಐಪಿಎಸ್ ಅಧಿಕಾರಿಗಳು ಗುಪ್ತಚರ ಮಾಹಿತಿಗಳನ್ನು ಕ್ರೋಡೀಕರಿಸಿ ವರದಿ ಸಿದ್ಧಪಡಿಸಿ ಪ್ರಧಾನಿಗೆ ಸಲ್ಲಿಸುವ ರೀತಿಯಲ್ಲಿ ಸಂವಿಧಾನದ ಕರಡು ತಿದ್ದಿ ಇಂಗ್ಲಿಷಿನಲ್ಲಿ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ ಎಂದು ವಿವಾದಿತ ಹೇಳಿಕೆ ನೀಡಿರುವ ಬಗ್ಗೆ ಪ್ರಗತಿಪರರು ಸೇರಿದಂತೆ ಎಲ್ಲರೂ ಧ್ವನಿಗೂಡಿಸಬೇಕೆಂದು ಬರಗೂರು ಕರೆ ನೀಡಿದರು.ರಾಯ್ ಅವರ ಹೇಳಿಕೆಯಲ್ಲಿ ಸಾಮಾಜಿಕ ಅಸಹನೆಯಿದೆ ಎನ್ನಬಹುದು ಎಂದ ಅವರು, ಹಿಂದೆ ಅಂಬೇಡ್ಕರ್ ಬಗ್ಗೆ ಇಂತಹ ಮಾತುಗಳನ್ನು ಹೇಳಲು ಸಾಧ್ಯವಿರಲಿಲ್ಲ. ಅಲ್ಲದೆ, ಟೀಕೆಗಾಗಿಯೂ ಹೆದರಿ ಹೇಳುತ್ತಿರಲಿಲ್ಲ. ಆದರೆ, ಇದೀಗ ಇಂತಹ ಹೇಳಿಕೆಗಳು ಹೊರಬರಲು ಕಾರಣಗಳೇನು, ಇದರ ಹಿಂದೆ ಯಾವ ಶಕ್ತಿಗಳಿವೆ ಎಂದು ಪ್ರಶ್ನಿಸಿದರು.
ರಾಯ್ ಬಹದ್ದೂರ್ ಅವರಂತೆ ಚಿಂತನೆಯುಳ್ಳವರನ್ನು ಕೇಂದ್ರದ ಇತಿಹಾಸ ಸಂಶೋಧನಾ ಪರಿಷತ್ ಹಾಗೂ ಸೆನ್ಸಾರ್ ಮಂಡಳಿ ಸೇರಿದಂತೆ ಇನ್ನಿತರೆ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಬಹುದೊಡ್ಡ ದುರಂತ ಎಂದ ಅವರು, ಇತ್ತೀಚೆಗೆ ಜಾತಿವಾದ, ಕೋಮುವಾದ ಮತ್ತು ಬಂಡವಾಳವಾದ ಹೆಚ್ಚು ವ್ಯಾಪ್ತಿ ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಹೋರಾಟ ಮಾಡಲು ಪ್ರತಿಯೊಬ್ಬರು ಪ್ರೊ.ಬಿ.ಕೃಷ್ಣಪ್ಪ ಅವರ ಪ್ರೇರಣೆಯನ್ನು ಪಡೆಯಬೇಕೆಂದು ಬರಗೂರು ನುಡಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಮಿತಿ ಸಂಚಾಲಕ ಸತ್ಯಭದ್ರಾವತಿ, ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ರಾಯ್ ಬಹದ್ದೂರ್ ಅವರು ಡಾ.ಅಂಬೇಡ್ಕರ್ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಬಗ್ಗೆ ಇದುವರೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಯಾರು ಕೂಡ ಖಂಡಿಸಿಲ್ಲ. ಇನ್ನು ಕಾಂಗ್ರೆಸ್ಸಿಗರಿಗೆ ಇದರ ಬಗ್ಗೆ ತಿಳಿದೇ ಇಲ್ಲ.
 - ಡಾ.ಬರಗೂರು ರಾಮಚಂದ್ರಪ್ಪ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News