×
Ad

ತನಿಖೆ ನಡೆಸುವ ತಾಕತ್ತಿದೆಯೇ?

Update: 2016-06-09 22:59 IST

ಮುಖ್ಯಮಂತ್ರಿಗೆ ಕುಮಾರಸ್ವಾಮಿ ಸವಾಲು

ಬೆಂಗಳೂರು, ಜೂ.9: ಮುಂಬೈನಲ್ಲಿರುವ ಮಾಫಿಯಾ ವ್ಯವಸ್ಥೆಗೆ ಪ್ರೋತ್ಸಾಹ ನೀಡುವಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲಯನ್ಸ್ ವಿವಿಯ ಕುಲಾಧಿಪತಿಯಾಗಿದ್ದ ಸಂದರ್ಭದಲ್ಲಿ ಡಾ.ಮಧುಕರ್ ನಡೆಸಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಸರಕಾರ ಉಪಕುಲಪತಿಯೊಬ್ಬರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ ಎಂದರು.
ನ್ಯಾಯಾಲಯದ ನಿರ್ದೇಶನದ ವಿರುದ್ಧ ಮಧುಕರ್‌ಗೆ ಗೂಂಡಾಗಳು ಹಾಗೂ ಪೊಲೀಸರ ರಕ್ಷಣೆಯೊಂದಿಗೆ ವಿವಿ ಆವರಣಕ್ಕೆ ನುಗ್ಗಿಸುವ ಪ್ರಯತ್ನ ನಡೆದಿದೆ. ಈ ಪ್ರಕರಣದಲ್ಲಿ ಕೆಲವು ಶಾಸಕರು ವ್ಯವಹಾರ ನಡೆಸುತ್ತಿದ್ದು, ಈ ಸಂಬಂಧ ತನಿಖೆ ನಡೆಸುವ ತಾಕತ್ತು ಮುಖ್ಯಮಂತ್ರಿಗೆ ಇದೆಯೇ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ನಾಗಮಂಗಲ ಶಾಸಕ ಚಲುವರಾಯಸ್ವಾಮಿಗೆ ನನ್ನ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಯಾವ ಮೊಬೈಲ್ ಸಂಖ್ಯೆಯಿಂದ ಆ ಸಂದೇಶಗಳು ಹೋಗಿವೆ ಎಂಬುದನ್ನು ಪರಿಶೀಲಿಸುತ್ತೇವೆ. ಜೂ.12ರಂದು ಕರೆದಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ 40 ಶಾಸಕರಿಗೂ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ನಮ್ಮ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ನಾನು ಹೇಳಿಲ್ಲ. ಆದರೆ, ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ನಡೆಯಲಿದೆ ಎಂಬುದು ಊಹಾಪೋಹ. ರಾಜ್ಯಸಭೆಯಲ್ಲಿ ಬಹಿರಂಗ ಮತದಾನ ನಡೆಯುವುದರಿಂದ ಯಾರು ಯಾರಿಗೆ ಮತ ನೀಡುತ್ತಾರೆ ಎಂಬುದನ್ನು ನೋಡೋಣ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News