ಅಕ್ರಮವಾಗಿ ತಗ್ಗು ಪ್ರದೇಶದಲ್ಲಿ ಮಣ್ಣು ಭರಾವ: ಜಿಲ್ಲಾಡಳಿತಕ್ಕೆ ದೂರು
ಕಾರವಾರ, ಜೂ.9: ಸಿಆರ್‌ಝಡ್ ಕಾನೂನು ಉಲ್ಲಂಘಿಸಿ ತಗ್ಗು ಪ್ರದೇಶದಲ್ಲಿ ಮಣ್ಣು ತುಂಬಿ, ನೀರು ಹರಿಯುವ ಕಾಲುವೆ ಮತ್ತು ಹಿನ್ನೀರು ಪ್ರದೇಶವನ್ನು ಎತ್ತರವನ್ನಾಗಿಸಿ ಸಾರ್ವಜನಿಕರ ಆಸ್ತಿ ಮತ್ತು ಜೀವಕ್ಕೆ ತೊಂದರೆ ಆಗುವಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡುತ್ತಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅಂಕೋಲಾದ ಹೊನ್ನೆಕೇರಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಹೊನ್ನೆಕೇರಿ ಅಂಕೋ ಲಾದ ಕೇಣಿ ಹಳ್ಳದ ತಟದಲ್ಲಿದೆ. ಇಲ್ಲಿನ 61,62,63 ಮತ್ತು 61/2ಅ 61/1ಕ, 61/1ಅ,61/1ಇ, 61/1ಎಫ್ ಸರ್ವೇ ನಂಬರಿನ ಪ್ರದೇಶಗಳು ಕೇಣಿ ಹಳ್ಳದ ತಟದಲ್ಲಿರುವ ತಗ್ಗು ಪ್ರದೇಶವಾಗಿದೆ. ಈ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಒತ್ತ್ತುವರಿ ಮಾಡಿಕೊಂಡ ಪ್ರದೇಶವನ್ನು ಸಂಪೂರ್ಣವಾಗಿ ಮಣ್ಣು ತುಂಬಿದ್ದರಿಂದ ಜನ ವಸತಿ ಸ್ಥಳಗಳು ಜಲಾವೃತ್ತವಾಗುವ ಭೀತಿಯಲ್ಲಿದೆ. ನೀರು ಹರಿಯಲು ಪಟ್ಟಣ ಪಂಚಾಯತ್‌ನ ಕೊಳವೆ ಪೈಪ್ ಅಳವಡಿಸಿದ್ದಾರೆ. ಮಳೆಗಾಲದಲ್ಲಿ ತುಂಬಿದ ನೀರು ಈ ಪೈಪ್‌ನಿಂದ ಸರಾಗವಾಗಿ ಹರಿಯಲು ಸಾಧ್ಯವಿಲ್ಲ. ಕೆಲವು ತಿಂಗಳ ಹಿಂದೆ ಹೊನ್ನೆಕೇರಿಯ ಸುನೀಲ್ ನಾಯ್ಕ ಗೂಂಡಾಗಳ ಜೊತೆಗೆ ಈ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಭರಾವ ಮಾಡಿ ಅನಾದಿಕಾಲದಿಂದ ಇದ್ದ ಕೊಳವೆ ಮಾರ್ಗವನ್ನು ಮುಚ್ಚಿದ್ದಾರೆ. ಈ ಪ್ರದೇಶದಲ್ಲಿ ನೀರು ತುಂಬಿ ಸಾರ್ವಜನಿಕರ ಆಸ್ತಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅನಧಿಕೃತವಾಗಿ ತುಂಬಿದ ಮಣ್ಣನ್ನು ತೆರವುಗೊಳಿಸಲು ಪಟ್ಟಣ ಪಂಚಾಯತ್‌ಗೆ ಜಿಲ್ಲಾಡಳಿತ ಆದೇಶ ನೀಡಬೇಕು. ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದಾರೆ.
ಮನವಿ ಸಲ್ಲಿಸುವ ನಿಯೋಗದಲ್ಲಿ ಸುಭಾಷ್ ನಾಯ್ಕ, ಮಹೇಶ್ ನಾಯ್ಕ, ಕಿರಣ್ ನಾಯ್ಕ, ಅನಿಲ್ ನಾಯ್ಕ, ರಾಮಾ, ಯೋಗೇಶ್, ಶಿವಾನಂದ, ರಾಜೇಶ್, ಪ್ರಸಾದ್, ದೀಪಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.