ಅಕ್ರಮ ಕಳ್ಳಭಟ್ಟಿ ತಯಾರಿಕೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಸಾಗರ, ಜೂ.9: ಗ್ರಾಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಮೋಹನ್ ತಿಳಿಸಿದ್ದಾರೆ.
ತಾಲೂಕಿನ ನಾಡಕಲಸಿಯಲ್ಲಿ ಅಬಕಾರಿ ಇಲಾಖೆ ಹಾಗೂ ಗ್ರಾಮ ಪಂಚಾಯತ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ವಾಗಿ ಕಳ್ಳಭಟ್ಟಿ ಮಾರಾಟ, ಮದ್ಯ ಮಾರಾಟ ದಂತಹ ಚಟುವಟಿಕೆಗಳು ನಡೆಸುತ್ತಿ ರುವುದು ಅತಿ ಕೆಟ್ಟ ಸಂಪ್ರದಾಯವಾಗಿದೆ. ಗ್ರಾಮಸ್ಥರು ಸಂಘಟಿತರಾಗಿ ಇಂತಹ ಅಕ್ರಮದ ವಿರುದ್ಧ ಧ್ವನಿ ಎತ್ತಬೇಕು ಎಂದರು.
ಕಳ್ಳಭಟ್ಟಿ ಸೇವನೆಯಿಂದ ಮನುಷ್ಯ ಕರುಳುಹುಣ್ಣು ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಾನೆ. ಕಳ್ಳಭಟ್ಟಿ ಮಾರಾಟ ಮಾಡುವ ಯಾವುದೇ ಅಂಗಡಿಗಳಿಗೆ ಪರವಾನಿಗೆ ನೀಡಬಾರದು ಎಂದು ಇಲಾಖೆ ವತಿಯಿಂದ ಸುತ್ತೋಲೆ ಕಳಿಸಲಾಗಿದೆ. ಇದನ್ನು ಗ್ರಾಮ ಪಂಚಾಯತ್‌ಗಳು ಅನುಷ್ಠಾನಕ್ಕೆ ತರಬೇಕು ಎಂದರು.
ಅಕ್ರಮ ಮದ್ಯಮಾರಾಟ ಹಾಗೂ ಚಿಲ್ಲರೆ ಮದ್ಯ ಮಾರಾಟದ ವಿರುದ್ಧ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯರು ಇಂತಹ ವಿಷಯ ಕುರಿತು ದೂರು ನೀಡಿದ ಕಡೆ ದಾಳಿ ಸಹ ನಡೆಸಲಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯ ಕ್ತಿಗೆ 15 ಸಾವಿರ ರೂ. ದಂಡ ವಿಧಿಸುವ ಜೊತೆಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ಇನಾಮು ನೀಡಲಾಗುತ್ತದೆ. ತಮ್ಮ ಭಾಗದಲ್ಲಿ ಇಂತಹ ಚಟುವಟಿಕೆ ನಡೆಯುತ್ತಿದ್ದರೆ ಮಾಹಿತಿ ಕೊಡುವಂತೆ ಅವರು ಕೋರಿದರು. ಈ ಬಗ್ಗೆ ಗ್ರಾಮಾಂತರ ಪ್ರದೇಶದ ಜನರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಎಲ್ಲ ಭಾಗಗಳಲ್ಲೂ ಜನಸಂಪರ್ಕ ಸಭೆ ಏರ್ಪಡಿಸಲಾಗುತ್ತಿದೆ ಎಂದರು. ನಾಡಕಲಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ಕಲಸೆ ಚಂದ್ರಪ್ಪ, ರಘುಪತಿ ಭಟ್, ಸವಿತಾ ನಟರಾಜ್, ಅಬಕಾರಿ ಉಪ ಅಧೀಕ್ಷಕಿ ಲೀಲಾವತಿ, ಉಪ ನಿರೀಕ್ಷಕ ಜಿ.ಅಣ್ಣಪ್ಪ, ಶರಾವತಿ ಮತ್ತಿತರರು ಉಪಸ್ಥಿತರಿದ್ದರು.