ಅಕ್ರಮ ಮರಳು ಗಣಿಗಾರಿಕೆ ಕಡಿವಾಣಕೆ್ಕ ಕಠಿಣ ಕ್ರಮ
ಮಡಿಕೇರಿ, ಜೂ. 9: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದು, ಅಕ್ರಮ ಮರಳು ಮಾಫಿಯಾವನ್ನು ನಿಯಂತ್ರಣ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ
. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಅಕ್ರಮ ಮರಳು ಸಾಗಣೆ ಬಗ್ಗೆ ಗೊತ್ತಿರುತ್ತದೆ. ಆದರೆ ಯಾವುದೇ ಅಕ್ರಮ ಮರಳು ಸಾಗಣೆ ನಡೆಯುತ್ತಿಲ್ಲ ಎಂಬ ಸುಳ್ಳು ಮಾಹಿತಿಯನ್ನು ನೀಡಲಾಗುತ್ತಿದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕಾಗುತ್ತದೆ ಎಂದರು.
ವೈದ್ಯಕೀಯ ಕಾಲೇಜು, ನ್ಯಾಯಾಲಯ ಕಟ್ಟಡ, ಮಹದೇವಪೇಟೆ ರಸ್ತೆ ಅಗಲೀಕರಣ ಸೇರಿದಂತೆ ಜಿಲ್ಲೆಯಲ್ಲಿ ಸರಕಾರಕ್ಕೆ ಸಂಬಂಧಪಟ್ಟ ಹಲವು ಕಾಮಗಾರಿಗಳು ನಡೆಯುತ್ತಿವೆ. ಇವುಗಳಿಗೆ ಮರಳು ದೊರೆಯಬೇಕು. ಮರಳು ಸ್ಟಾಕ್ ಇಲ್ಲ ಎಂಬ ಸಬೂಬು ಹೇಳುವುದು ಬೇಡ. ಅಕ್ರಮ ಹಾಗೂ ನಿಗದಿಗಿಂತ ಹೆಚ್ಚು ಮರಳು ಸಾಗಣೆಯಿಂದ ರಸ್ತೆ ಹಾಳಾಗುತ್ತದೆ. ಅಪಘಾತಗಳು ಸಂಭವಿಸುತ್ತವೆ. ಅಲ್ಲದೇ ಸ್ಥಳೀಯರಿಗೆ ಮರಳು ದೊರೆಯುವುದಿಲ್ಲ. ಇವುಗಳನ್ನು ಅಧಿಕಾರಿಗಳು ಗಮನಿಸಿ, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು. ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ನಿರ್ವಹಣೆಯಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಸ್ಟಾಕ್‌ಯಾರ್ಡ್‌ಗಳನ್ನು ಬಲಪಡಿಸಬೇಕು ಎಂದು ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಸರಕಾರಿ ಕಾಮಗಾರಿಗಳಿಗೆ ಮರಳು ಬೇಡಿಕೆ ಎಷ್ಟಿದೆ ಎಂಬುದನ್ನು ತಿಳಿದಿರಬೇಕು. ಕೊಡ್ಲಿಪೇಟೆಯಲ್ಲಿ ಜೆಸಿಬಿ ಬಳಸಿ ರಾತ್ರಿ ವೇಳೆಯಲ್ಲಿ ಮರಳು ಸಾಗಣೆ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ರಾತ್ರಿ ವೇಳೆಯಲ್ಲಿ ಸಾಗಾಟ ಮಾಡುವ ಮರಳು ಸ್ಟಾಕ್‌ಯಾರ್ಡ್‌ಗೆ ಬರುವುದಿಲ್ಲ. ಆದ್ದರಿಂದ ಮರಳು ಗಣಿಗಾರಿಕೆ ಟೆಂಡರ್ ಪಡೆದಿರುವವರನ್ನು ಕರೆಸಿ ಮಾತನಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಮಹೇಶ ಮಾತನಾಡಿ, ಜಿಲ್ಲೆಯ ತೊರೆನೂರು, ಕೆಳಕೊಡ್ಲಿ, ಹಂಪಾಪುರ, ಶಾಂತಪುರ, ಕಟ್ಟೆಪುರಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಮಳೆಗಾಲ ಆರಂಭವಾಗಿದ್ದು, ಜೂ. 10ರಿಂದ ಮರಳು ಗಣಿಗಾರಿಕೆ ನಿಷೇಧಕ್ಕೆ ಆದೇಶ ಹೊರಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಜಿಪಂ ಸಿಇಒ ಚಾರುಲತಾ ಸೋಮಲ್, ಅಕ್ರಮ ಮರಳು ಸಾಗಣೆ ತಡೆಯುವ ಬಗ್ಗೆ ಹಲವು ಸಲಹೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸುಮಿತ್ರಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಂ.ಜಿ. ಹೆಗಡೆ, ಎಇಇ ಸತ್ಯನಾರಾಯಣ, ಪರಿಸರ ಇಲಾಖೆ ಅಧಿಕಾರಿ ಮತ್ತಿತರರು ಹಲವು ಮಾಹಿತಿ ನೀಡಿದರು.
ಪೊಲೀಸ್ ಪಡೆ ನಿಯೋಜಿಸುವ ಭರವಸೆ: ಮಂಗಳೂರು ಕಡೆಯಿಂದ ಬರುವ ಲಾರಿಗಳನ್ನು ತಪಾಸಣೆ ಮಾಡಬೇಕು. ಅಕ್ರಮ ಮರಳು ತಪಾಸಣೆ ಮಾಡುವ ಸಂದರ್ಭ ಪೊಲೀಸ್ ರಕ್ಷಣೆ ಪಡೆಯುವುದು ಸೂಕ್ತ. ಎಷ್ಟು ಬೇಕಾದರೂ ಪೊಲೀಸ್ ಪಡೆ ನಿಯೋಜಿಸಲು ಇಲಾಖೆ ಸಿದ್ಧವಿದೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಇದೇ ಸಂದರ್ಭ ಸ್ಪಷ್ಟಪಡಿಸಿದರು.