ರಸಗೊಬ್ಬರ-ಬಿತ್ತನೆ ಬೀಜದ ಕೊರತೆಯಿಲ್ಲ: ಸಿಇಒ
ಶಿವಮೊಗ್ಗ, ಜೂ. 9: ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನಿದೆ. ರೈತರಿಗೆ ಸಕಾಲದಲ್ಲಿ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕೆ. ರಾಕೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯಲ್ಲಿಯೂ ತೊಡಿಂದರೆಯಾಗದಂತೆ ಹಾಗೂ ಗೊಂದಲಕ್ಕೆ ಆಸ್ಪದವಾಗದಂತೆ ಬಿತ್ತನೆ ಬೀಜ-ರಸಗೊಬ್ಬರ ಪೂರೈಸುವಂತೆ ಕೃಷಿ ಇಲಾಖೆ ಸೇರಿದಂತೆ ತಾಲೂಕು ಆಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಎಷ್ಟು ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಮೆಕ್ಕೆಜೋಳ, ರಾಗಿ ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಲಾಗುತ್ತದೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಇದಕ್ಕೆ ಅನುಗುಣವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಬೇಡಿಕೆ-ಪೂರೈಕೆಯ ನಡುವೆ ವ್ಯತ್ಯಯವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಶೇಷ ಸಭೆ: ಜಿ
ಲ್ಲಾ ಪಂಚಾಯತ್‌ವಿಶೇಷ ಸಭೆ ಆಹ್ವಾನಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯ 15 ಸದಸ್ಯರು, ಸಂಸದ ಹಾಗೂ ಎಂ.ಎಲ್.ಸಿ.ಯವರು ವಿಶೇಷ ಸಭೆ ಕರೆಯುವಂತೆ ಮನವಿ ಅರ್ಪಿಸಿದರು. ಈ ಹಿನ್ನೆಲೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಸಭೆ ಕರೆಯಲಾಗಿದೆ ಎಂದು ಇದೇ ಸಂದಭರ್ದಲ್ಲಿ ಸಿಇಓ ಕೆ. ರಾಕೇಶ್‌ಕುಮಾರ್‌ರವರು ಉತ್ತರಿಸಿದರು. ವೀಡಿಯೊ ಕಾನ್ಫರೆನ್ಸ್: ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿ ಗಳೊಂದಿಗೆ ಗುರುವಾರ ಬೆಳಗ್ಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ್ದೇನೆ. ಮಳೆಗಾಲ ಆರಂಭವಾಗಿರುವುದರಿಂದ ಕೈಗೊಳ್ಳಬೇಕಾದ ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ-ಸೂಚನೆ ನೀಡಿದ್ದೇನೆ.ಕೃಷಿ ಚಟುವಟಿಕೆ ರಸಗೊಬ್ಬರ ಮತ್ತಿತರ ಮಾಹಿತಿ ಸಂಗ್ರಹಿಸಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.