ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಇಂದು ಚುನಾವಣೆ

Update: 2016-06-09 18:27 GMT

‘ನೋಟಾ’ಗೆ ಅವಕಾಶ
ಮತಗಟ್ಟೆಯೊಳಗೆ ಮೊಬೈಲ್ ನಿಷೇಧ
ಸಂಜೆ ವೇಳೆಗೆ ಫಲಿತಾಂಶ ಪ್ರಕಟ

ಬೆಂಗಳೂರು, ಜೂ.9: ವಿಧಾನ ಪರಿಷತ್ ಹಾಗೂ ರಾಜ್ಯಸಭೆಗೆ ಕ್ರಮವಾಗಿ ಜೂ.10 ಮತ್ತು ಜೂ.11ರಂದು ನಡೆಯಲಿರುವ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಮೊದಲನೆ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಮತದಾನ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ನ ಏಳು ಸ್ಥಾನಗಳಿಗೆ ಜೂ.10ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.

ರಹಸ್ಯ ಮತದಾನ ನಡೆಯಲಿದ್ದು, ಮತದಾರರು(ಶಾಸಕರು) ಯಾರಿಗೆ ಮತ ಹಾಕುತ್ತೇವೆಂದು ತಮ್ಮ ಪಕ್ಷದ ಏಜೆಂಟರಿಗೆ ಮತಪತ್ರವನ್ನು ತೋರಿಸುವ ಅಗತ್ಯವಿಲ್ಲ ಎಂದ ಅವರು, ವಿಧಾನಸಭೆ ನಾಮ ನಿರ್ದೇಶನ ಸದಸ್ಯರು, ಸ್ಪೀಕರ್ ಸೇರಿದಂತೆ 225 ಶಾಸಕರು ನಾಳಿನ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಮಾಹಿತಿ ನೀಡಿದರು.
ಮೊಬೈಲ್ ನಿಷೇಧ: ಮತ ಚಲಾಯಿಸುವ ವೇಳೆ ಶಾಸಕರು ಮತಗಟ್ಟೆಯೊಳಗೆ ಮೊಬೈಲ್‌ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದ ಅವರು, ಇದೇ ಮೊದಲ ಬಾರಿಗೆ ಮತದಾನ ಪ್ರಕ್ರಿಯೆ ಹಾಗೂ ಮತ ಎಣಿಕೆ ಕಾರ್ಯಗಳನ್ನು ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಲಾಗುವುದು ಎಂದು ತಿಳಿಸಿದರು.
‘ನೋಟಾ’ಗೆ ಅವಕಾಶ: ಇದೇ ಮೊದಲ ಬಾರಿಗೆ ವಿಧಾನಪರಿಷತ್ ಚುನಾವಣೆಯ ಮತ ಪತ್ರಗಳಲ್ಲಿ ‘ನೋಟಾ’ವನ್ನು ಅಳವಡಿಸಲಾಗಿದೆ. ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ಇಚ್ಛೆ ಇಲ್ಲದವರು ಈ ಕಾಲಂ ಅನ್ನು ಗುರುತಿಸ ಬಹುದು ಎಂದು ಅವರು ಮಾಹಿತಿ ನೀಡಿದರು. ಮತಪತ್ರದಲ್ಲಿ ಪ್ರಥಮ ಬಾರಿಗೆ ಅಭ್ಯರ್ಥಿಗಳ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ. ಮತದಾರರಿಗೆ (ಶಾಸಕರಿಗೆ) ಮತಪತ್ರ ಹಾಗೂ ನೇರಳೆ ಬಣ್ಣದ ಪೆನ್ನನ್ನು ನೀಡಲಿದ್ದೇವೆ.
ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬಹುದು ಎಂದು ಎಸ್.ಮೂರ್ತಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಮತ ಎಣಿಕೆ: ವಿಧಾನ ಪರಿಷತ್ ಚುನಾವಣೆ ಮತದಾನದ ಬಳಿಕ ಅಂದೇ ಸಂಜೆ 5ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದ ಅವರು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಸಕಲ ಸಿದ್ಧತೆ ಂದು ತಿಳಿಸಿದರು.

ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ವೀಣಾ ಅಚ್ಚಯ್ಯ, ರಿಝ್ವೆನ್ ಅರ್ಶದ್, ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ್, ಬಿಜೆಪಿಯ ವಿ.ಸೋಮಣ್ಣ, ಲೇಹರ್ ಸಿಂಗ್, ಜೆಡಿಎಸ್‌ನ ನಾರಾಯಣಸ್ವಾಮಿ ಹಾಗೂ ಡಾ.ವೆಂಕಟಪತಿ ಸೇರಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂ.10ರಂದು ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು(ಶಾಸಕರು) ತೀರ್ಮಾನಿಸಲಿದ್ದು, ಸಂಜೆ 5:30ರ ಸುಮಾರಿಗೆ ಫಲಿತಾಂಶ ನಿಚ್ಚಳವಾಗಲಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ಆದರೆ, ವಿಧಾನ ಪರಿಷತ್‌ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆಯೇ ಪೈಪೋಟಿ ಏರ್ಪಟ್ಟಿರುವುದು ಕುತೂಹಲ ಸೃಷ್ಟಿಸಿದೆ.

ಮತದಾರರು: ಕಾಂಗ್ರೆಸ್-123, ಬಿಜೆಪಿ-44, ಜೆಡಿಎಸ್-40, ಬಿಎಸ್ಸಾರ್ ಕಾಂಗ್ರೆಸ್-3, ಕೆಜೆಪಿ-2, ಸರ್ವೋದಯ ಕರ್ನಾಟಕ ಪಕ್ಷ-1, ಕರ್ನಾಟಕ ಮಕ್ಕಳ ಪಕ್ಷ-1, ಪಕ್ಷೇತರರು-9, ಸ್ಪೀಕರ್-1 ಹಾಗೂ ನಾಮನಿರ್ದೇಶಿಕ ಸದಸ್ಯರು-1 ಸೇರಿದಂತೆ ಒಟ್ಟು 225ಮಂದಿ ಮತದಾರರಿದ್ದಾರೆ.

ರಾಜ್ಯಸಭೆಗೂ ಸಿದ್ಧತೆ: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.11ರಂದು ನಡೆಯಲಿರುವ ಚುನಾವಣೆಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಲ್ಮನೆ ಮಾದರಿಯಲ್ಲೇ ಬೆಳಗ್ಗೆ 9ರಿಂದ ಸಂಜೆ 4ಗಂಟೆಯ ವರೆಗೂ ಮತದಾನ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದರು.

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದೇ ದಿನ ಸಂಜೆ 5ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಜನರಿಂದ ಆಯ್ಕೆಯಾದ 224 ಮಂದಿ ಸದಸ್ಯರು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.


ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ರಾಜ್ಯಸಭೆ ಚುನಾವಣೆಯಲ್ಲಿಯೂ ಮೂವರು ಅಭ್ಯರ್ಥಿಗಳು ನಮ್ಮ ಪಕ್ಷದ ಸದಸ್ಯರು ಹಾಗೂ ಪಕ್ಷೇತರ ಶಾಸಕರ ಬೆಂಬಲದಿಂದ ಅನಾಯಾಸವಾಗಿ ಜಯ ಸಾಧಿಸಲಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂ
ತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News