ರಸಗೊಬ್ಬರ ಕಾರ್ಖಾನೆ ಆರಂಭ, ಒಂದು ಲಕ್ಷ ಕನ್ನಡಿಗರಿಗೆ ಉದ್ಯೋಗ
ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಸಚಿವ ಅನಂತಕುಮಾರ್ ಭರವಸೆ
ಬೆಂಗಳೂರು, ಜೂ. 10: ರಾಜ್ಯದಲ್ಲಿ ರಸಗೊಬ್ಬರಕ್ಕೆ ಸಂಬಂಧಪಟ್ಟಂತೆ ಕಾರ್ಖಾನೆಯೊಂದನ್ನು ಆರಂಭಿಸಿ ಸುಮಾರು ಒಂದು ಲಕ್ಷ ಕನ್ನಡಿಗರಿಗೆ ಉದ್ಯೋಗವನ್ನು ಒದಗಿಸಲಾಗುವುದು ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಟಿ.ಎ.ನಾರಾಯಣಗೌಡ 50ರ ಸಂಭ್ರಮ ಅಂಗವಾಗಿ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಹಾಗೂ ರಾಷ್ಟ್ರೀಯ ಜಾನಪದ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದಲ್ಲಿ ಉದ್ದಿಮೆಯನ್ನು ಬೆಳೆಸಲು ಹಾಗೂ ಕನ್ನಡಿ ಗರಿಗೆ ಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿ ಕರ್ನಾ ಟಕದ ವ್ಯಾಪ್ತಿಯಲ್ಲಿ ರಸಗೊಬ್ಬರ ಕಾರ್ಖಾನೆ ತೆರೆದು ಅದರಲ್ಲಿ ಸುಮಾರು 1 ಲಕ್ಷ ಕನ್ನಡಿಗರಿಗೆ ಉದ್ಯೋಗ ಒದಗಿಸುವ ಕೆಲಸವನ್ನು ಕೇಂದ್ರ ಸರಕಾರದ ವತಿಯಿಂದ ಮಾಡಲಾಗುತ್ತಿದ್ದು, ಈ ಸಂಬಂಧ ರಾಜ್ಯ ಸರಕಾರದ ಜೊತೆ ಚರ್ಚಿಸಿ ದ್ದೇನೆ. ಇದಕ್ಕೆ ರಾಜ್ಯ ಸರಕಾರವು ಸಮ್ಮತಿಸಿದೆ ಎಂದರು.
ಈ ಕಾರ್ಖಾನೆಯನ್ನು 6500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಇದರಲ್ಲಿ 13 ಲಕ್ಷ ಮೆಟ್ರಿಕ್‌ಟನ್ ಗೊಬ್ಬರವನ್ನು ತಯಾರಿಸಲಾಗುವುದು. ಈ ರಸಗೊಬ್ಬರ ಕಾರ್ಖಾನೆಯಲ್ಲಿ ಬೇವು ಲೇಪಿತ ಯೂರಿಯ ತಯಾರಿಸಲಾ ಗುವುದು ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಭಾಷಾ ಉನ್ನತ ಅಧ್ಯಯನ ಕೇಂದ್ರ: ಬೆಂಗಳೂರಿನಲ್ಲಿ ಭಾಷಾ ಉನ್ನತ ಅಧ್ಯಯನ ಕೇಂದ್ರ ತೆರೆ ಯುವ ಸಲುವಾಗಿ ಇತ್ತೀಚೆಗೆ ಸಂಸದರ ನಿಯೋಗವೊಂದನ್ನು ಕರೆದುಕೊಂಡು ಹೋಗಿ ಕೇಂದ್ರಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿಯವರನ್ನು ಭೇಟಿಯಾಗಿದ್ದು, ಇದಕ್ಕೆ ಸಚಿವರು ಸ್ಪಂದಿಸಿ ಕ್ಯಾಂಪಸ್ ನೀಡಿ ಇನ್ನು ಮೂರು ತಿಂಗಳೊ ಳಗೆ ಬೆಂಗಳೂರಿನಲ್ಲಿ ಭಾಷಾ ಉನ್ನತ ಅಧ್ಯಯನ ಕೇಂದ್ರವನ್ನು ತೆರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕನ್ನಡ ನಾಡು ನುಡಿಯ ರಕ್ಷಣೆಗೆ ಹೋರಾಟ ಮಾಡುವವರ ವಿರುದ್ಧ ಹಾಕಿರುವ ಮೊಕದ್ದಮೆಗಳ ರದ್ದುಗೊಳಿಸುವ ಸಂಬಂಧ ಸಿಎಂ ಗೆ ಚರ್ಚಿಸಲಾಗುವುದೆಂದು ಹೇಳಿದರು.
ಇದಕ್ಕೂ ಮೊದಲು ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಮಾತನಾಡಿ, 62 ಲಕ್ಷ ಕಾರ್ಯಕರ್ತರನ್ನು ಹೊಂದಿ ರುವ ಕರವೇ ಮುಂದಿನ ದಿನಗಳಲ್ಲೂ ಕನ್ನಡ ಮತ್ತು ಕನ್ನಡಿಗರ ರಕ್ಷಣೆಗೆ ಹೋರಾಟ ನಡೆಸಲಿದೆ. ಅದೇ ರೀತಿ, ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಯಲ್ಲಿ ತೊಡಗಿರುವ ಕರವೇ ರೈಲ್ವೆ ನೇಮಕಾತಿಯಲ್ಲಿ ಆಗುತ್ತಿದ್ದ ಅನ್ಯಾಯ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ನಡೆಸಿದ ಹೋರಾಟ, ಮಹಾದಾಯಿ, ಕಾವೇರಿ, ಕೃಷ್ಣ, ಮುಂತಾದ ಹೋರಾಟಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ, ಆದಿಚುಂಚನ ಗಿರಿಯ ನಿರ್ಮಲಾನಂದ ಸ್ವಾಮೀಜಿ, ಬಸವ ದೇವ ಪಟ್ಟದೇ ವರು, ಮಾಜಿ ಸಂಸದ ಜಿ.ಮಾದೇಗೌಡ, ನಾಡೋಜ ಹಂಪ ನಾಗರಾಜಯ್ಯ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಶಾಸಕರಾದ ಎನ್.ಎ. ಹಾರೀಸ್, ಅಶ್ವತ್ ನಾರಾಯಣ, ಗೋಪಾಲಯ್ಯ ಹಾಗೂ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ರೈತ ಮುಖಂಡ ಸುರೇಶ್ ಪ್ರಭು, ಜಾನಪದ ತಜ್ಞ ಡಾ.ಶಿವಶಂಕರ್, ವಿಧಾನಪರಿಷತ್ ಸದಸ್ಯೆ ಡಾ. ಜಯಮಾಲ, ಪತ್ರಕರ್ತ ರವಿ ಹೆಗಡೆ ಸೇರಿ ಪ್ರಮುಖರು ಉಪಸ್ಥಿತರಿದ್ದರು.