ಅಂಕೋಲಾ: ಸೀಬರ್ಡ್ ನೌಕಾನೆಲೆ ನಿರಾಶ್ರಿತರಿಂದ ಧರಣಿ
ಅಂಕೋಲಾ, ಜೂ.10: ಸೀಬರ್ಡ್ ನೌಕಾನೆಲೆಯಿಂದಾಗಿ ನಿರಾಶ್ರಿತರಾದ ತಾಲೂಕಿನ 165 ಕುಟುಂಬದವರು ಹೆಚ್ಚಿನ ಪರಿಹಾರಕ್ಕಾಗಿ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅಂಕೋಲಾದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆ ಈಗ ಕುಮಟಾಕ್ಕೆ ವರ್ಗಾಯಿಸಿದ್ದರಿಂದ ಆಕ್ರೋಶಗೊಂಡ ನಿರಾಶ್ರಿತರು ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಾವಿಕೇರಿ, ಹಟ್ಟಿಕೇರಿ, ಅಲಗೇರಿ, ಬೆರಡೆ, ಬೇಲೆಕೇರಿ ಗ್ರಾಮಗಳ ಬಹುತೇಕ ಪ್ರದೇಶಗಳನ್ನು 1984ರಲ್ಲಿ ಸೀಬರ್ಡ್ ನೌಕಾನೆಲೆಯವರು ಸ್ವಾಧೀನಪಡಿಸಿಕೊಂಡು ಗುಂಟೆಗೆ 180 ರೂ.ನಂತೆ ಪರಿಹಾರ ನೀಡಿದ್ದರು. ಇದರಿಂದಾಗಿ ಆಕ್ರೋಶಗೊಂಡ ನಿರಾಶ್ರಿತರು ನ್ಯಾಯಾಲಯದ ಮೂಲಕ ಹೆಚ್ಚಿನ ಪರಿಹಾರಕ್ಕಾಗಿ ಕಳೆದ 30 ವರ್ಷಗಳಿಂದ ಹೋರಾಟ ನಡೆಸಿದ್ದರು.
ನಿರಾಶ್ರಿತರಿಗೆ ಅನ್ಯಾಯವಾಗಿದೆ ಎಂದು ಅರಿತ ಸುಪ್ರೀಂ ಕೋರ್ಟ್ ಕಳೆದ ವರ್ಷ ಗುಂಟೆಗೆ 11,500 ರೂ.ನಂತೆ ಬಡ್ಡಿ ಸಮೇತ ಪರಿಹಾರ ವಿತರಿಸುವಂತೆ ಆದೇಶಿಸಿತ್ತು. ಆದರೆ ಸರಕಾರ ಪರಿಹಾರವನ್ನು ಇದುವರೆಗೂ ವಿತರಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಕುಮಟಾ ಉಪವಿಭಾಗಾಧಿಕಾರಿಗಳು ಅಂಕೋಲಾ ತಹಶೀಲ್ದಾರ್ ಕಚೆೇರಿಯಲ್ಲಿ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಹೊಸದಾಗಿ ಬಂದ ಉಪ ವಿಭಾಗಾಧಿಕಾರಿ ರಮೇಶ್ ಕಳಸದ ಅವರು ಈ ಎಲ್ಲ ಪ್ರಕರಣಗಳನ್ನು ಕುಮಟಾದಲ್ಲಿಯೇ ನಡೆಸುವುದಾಗಿ ಮೌಖಿಕವಾಗಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಶುಕ್ರವಾರ ಅಂಕೋಲಾದಲ್ಲಿ ನಡೆಯಬೇಕಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ನಿರಾಶ್ರಿತರು ಆಗಮಿಸಿದ್ದರು. ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಈ ಪ್ರಕರಣವನ್ನು ಕುಮಟಾಕ್ಕೆ ವರ್ಗಾಯಿಸಲಾಗಿದ್ದು, ಅಲ್ಲಿಗೆ ತೆರಳಲು ಸೂಚಿಸಿದ್ದರು. ಅದರಂತೆ ಕೆಲವರು ಕುಮಟಾಕ್ಕೆ ತೆರಳಿದರು. ಇನ್ನು ಕೆಲವು ನಿರಾಶ್ರಿತರು ಈ ಕ್ರಮವನ್ನು ವಿರೋಧಿಸಿ ತಹಶೀಲ್ದಾರ್ ಕಚೆೇರಿ ಎದುರು ಧರಣಿ ನಡೆಸಿ, ಅಂಕೋಲಾದಲ್ಲಿಯೇ ವಿಚಾರಣೆ ಮುಂದುವರಿಸುವಂತೆ ಆಗ್ರಹಿಸಿದರು. ಇದಕ್ಕೆ ಸಂಬಂಧಿಸಿದಂತೆ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ನಿರಾಶ್ರಿತ ಉದಯ ವಾಮನ ನಾಯಕ ಭಾವಿಕೇರಿ ಹೇಳಿದರು.
ಧರಣಿಯಲ್ಲಿ ತಾಪಂ ಸದಸ್ಯ ಸಂಜೀವ ಕುಚಿನಾಡ, ಪ್ರಮುಖರಾದ ಬೊಮ್ಮಯ್ಯ ನಾಯ್ಕ, ಪದ್ಮನಾಭ ಶೆಟ್ಟಿ, ತಿಮ್ಮಣ್ಣ ನಾಯಕ, ಪಾರ್ವತಿ ಗೌಡ, ಸಣ್ಣು ಡಿಂಗಾ ಗೌಡ, ಸುಮಿತ್ರಾ ಗೌಡ, ಶಂಕರ ನಾಗಪ್ಪ ಗೌಡ, ಹರೀಶ ಬೊಮ್ಮಯ್ಯ ನಾಯ್ಕ, ಪ್ರಕಾಶ ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.