ಕಾರವಾರ ಕದಂಬ ನೌಕಾನೆಲೆಯಲ್ಲಿ ಅನಿಲ ಸೋರಿಕೆ
Update: 2016-06-10 23:12 IST
ಕಾರವಾರ, ಜೂ. 10: ಕದಂಬ ನೌಕಾನೆಲೆಯ ಐ.ಎನ್.ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಕೆಲಸ ಮಾಡುವಾಗ ಅನಿಲ ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಇಬ್ಬರು ನೌಕಾ ಸಿಬ್ಬಂದಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ನೌಕಾ ಸಿಬ್ಬಂದಿ ಬಿಹಾರ ಮೂಲದ ರಾಕೇಶ್ ಕುಮಾರ್ (28) ಹಾಗೂ ಕಾರವಾರ ತಾಲೂಕಿನ ಆಮದಳ್ಳಿ ಮೂಲದ ಮೋಹನ್‌ದಾಸ್ (27) ಎಂದು ಗುರುತಿಸಲಾಗಿದೆ.
ವಿಕ್ರಮಾದಿತ್ಯ ನೌಕೆಯ ಸೀವೇಜ್ ಟ್ರೀಟ್‌ಮೆಂಟ್ ಪ್ಲ್ಯಾಂಟ್‌ನಲ್ಲಿ ಕಾರ್ಯನಿರ್ವಹಿಸುವಾಗ ಭಾರೀ ಮಟ್ಟದಲ್ಲಿ ಅನಿಲ ಸೋರಿಕೆಯಾಗಿದೆ. ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಅಸ್ವಸ್ಥರಾಗಿದ್ದವರನ್ನು ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.