ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ: ನಾಗರಾಜ್
ತರೀಕೆರೆ, ಜೂ.10: ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗುವುದು. ಜಂಭದಹಳ್ಳ ಜಲಾಶಯದಿಂದ ಮಾನಸಿ ಕೆರೆಗೆ ನೀರು ತುಂಬಿಸಲಾಗುವುದು ಎಂದು ಅಧ್ಯಕ್ಷ ಟಿ.ಟಿ.ಸನಾಗರಾಜ್ ತಿಳಿಸಿದರು.
ಅವರು 2016-17ನೆ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಕ್ರಿಯಾ ಯೋಜನೆ ತಯಾರಿಸುವ ಪ್ರಯುಕ್ತ ಕರೆದಿದ್ದ ಪುರಸಭೆಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದಸ್ಯ ಸುರೇಶ್ ಮಾತನಾಡಿ, 5ದಿನಕ್ಕೊಮ್ಮೆ ಕೇವಲ ಅರ್ಧ ಗಂಟೆ ನೀರು ಸರಬರಾಜು ಮಾಡಿದರೆ ಹೇಗೆ? ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಟಿ.ಟಿ.ನಾಗರಾಜ್, ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗುವುದು. ಜಂಭದಹಳ್ಳ ಜಲಾಶಯದಿಂದ ಮಾನಸಿ ಕೆರೆಗೆ ನೀರು ತುಂಬಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್ ಹಾಗೂ ಸದಸ್ಯ ಈರಣ್ಣ ಮಾತನಾಡಿ, ವಿಕಲಚೇತನರ ಆಯ್ಕೆ ವಿಚಾರದಲ್ಲಿ ರಾಜಕಾರಣ ಬೇಡ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಪದೇ ಪದೇ ಹೊಸದಾಗಿ ಅರ್ಜಿ ಪಡೆಯುವ ಬದಲು ಹಿಂದಿನ ಸಭೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ತ್ರಿಚಕ್ರ ವಾಹನಗಳನ್ನು ವಿತರಿಸಬೇಕು ಎಂದು ಸಲಹೆ ನೀಡಿದರು.
ಸದಸ್ಯೆ ಪರ್ವಿನ್‌ತಾಜ್ ಮಾತನಾಡಿ, ಸ್ಮಶಾನ ಅಭಿವೃದ್ಧಿಗಾಗಿ ನಿಗದಿಪಡಿಸಿದ್ದ 6ಲಕ್ಷ 30 ಸಾವಿರ ರೂ. ನಲ್ಲಿ ಕೇವಲ 2ಲಕ್ಷ 30ಸಾವಿರ ರೂ. ಬಿಡುಗಡೆಯಾಗಿದೆ. ಇದು ಕಾಮಗಾರಿಗೆ ಸಾಕಾಗುವುದಿಲ್ಲ. ಉಳಿದ ಅನುದಾನ ನೀಡಿದರೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಪದ್ಮರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಗಣಪತಿ ಪೆಂಡಾಲ್ ಬಳಿ ರಸ್ತೆಗೆ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಸ್ಥಳದಲ್ಲಿ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಎಸ್‌ಎಫ್‌ಸಿ ಅನುದಾನದಲ್ಲಿ ಸ್ಲ್ಯಾಬ್ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ, ಸದಸ್ಯರು, ಮುಖ್ಯಾಧಿಕಾರಿ ಗಿರೀಶ್, ಅಧಿಕಾರಿಗಳಾದ ಮಹೇಶ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.