ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರ ಧರಣಿ
ಚಿಕ್ಕಮಗಳೂರು, ಜೂ.10: ಅಂಚೆ ನೌಕರರ ತಮ್ಮ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಆಗ್ರಹಿಸಿ ಚಿಕ್ಕಮಗಳೂರು ನಗರದ ಪ್ರಧಾನ ಅಂಚೆ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿ ಅಂಚೆ ಅಧೀಕ್ಷಕರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಇತ್ತೀಚೆಗಿನ ದಿನಗಳಲ್ಲಿ ಅಂಚೆ ಇಲಾಖೆಯಲ್ಲಿ ತಂದಿರುವ ಸಿಬಿಎಸ್(ಕೋರ್ ಬ್ಯಾಂಕಿಂಗ್ ಸಿಸ್ಟಮ್)ನಲ್ಲಿ ಸಂಪೂರ್ಣ ವ್ಯವಹಾರ ಮಾಡುತ್ತಿದೆ. ಇದಕ್ಕೆ ಬೇಕಾದ ಇಂಟರ್‌ನೆಟ್ ಬ್ಯಾಂಡ್ ವಿಡ್ತ್ ಒದಗಿಸದಿರುವುದರಿಂದ ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸಲು ನೌಕರರು ಹರ ಸಾಹಸ ಪಡಬೇಕಾಗಿದೆ. ಈ ದಿಸೆಯಲ್ಲಿ ಇಲಾಖೆಯು ಇನ್ಫೋಸಿಸ್‌ನಿಂದ 2ಸರ್ವರ್‌ಗಳನ್ನು ಹೆಚ್ಚುವರಿಯಾಗಿ ಕೊಡುವಂತೆ ಕೇಳಿದ್ಯಾಗೂ ಕೊಡದೇ ಇರುವುದರಿಂದ ಸಮಸ್ಯೆ ಉಲ್ಭಣಗೊಂಡಿದೆ ಎಂದಿದ್ದಾರೆ.
ಈ ಕಾರಣದಿಂದ ನೌಕರರಿಗಷ್ಟೆ ಅಲ್ಲದೆ ಗ್ರಾಹಕರಿಗೂ ಗಂಟೆಕಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯವಹಾರ ಸಮಯವನ್ನು ಕಡಿತಗೊಳಿಸುವ ಬಗ್ಗೆ ಡೈರೆಕ್ಟರೇಟ್‌ನಿಂದ ಆದೇಶ ಹೊರಡಿಸಲಾಗಿದ್ದು, ಇಲಾಖೆ ಕ್ರಮ ಕೈಗೊಂಡಿಲ್ಲ. ಫಿನಾಕಲ್‌ನಲ್ಲಿ ಆದ ಸಣ್ಣ ಸಣ್ಣ ತಪ್ಪುಗಳಿಗೂ ಚಾರ್ಜ್ ಶೀಟ್ ಕೊಡುವುದನ್ನು ನಿಲ್ಲಿಸಬೇಕು. ಮಹಿಳಾ ನೌಕರರಿಗಿಂತೂ ಅಧಿಕ ತೊಂದರೆಯಾಗುತ್ತಿರುವುದರಿಂದ ಕೂಡಲೇ ಇಲಾಖೆ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಚೇ ನೌಕರರ ಸಂಘದ ಅಧ್ಯಕ್ಷ ಜಿ.ಬಿ.ಪುಟ್ಟಸ್ವಾಮಿ, ಎಐಪಿಇಯು ಪಿ3 ಕಾರ್ಯದರ್ಶಿ ಡಿ.ಎಂ.ಲೋಕಪ್ಪಗೌಡ, ಎನ್‌ಯುಪಿಇ ಪಿ3 ಕಾರ್ಯದರ್ಶಿ ಜಿ.ಎಸ್.ಹುಲಿರಾಜ್, ಎಐಪಿಇಯು ಪಿ4 ಕಾರ್ಯದರ್ಶಿ ಪ್ರಸನ್ನಕುಮಾರ್, ಎನ್‌ಯುಪಿಇ ಪಿ4 ಕಾರ್ಯದರ್ಶಿ ಎಸ್.ಡಿ.ಕೃಷ್ಣಪ್ಪ ಸಿಬ್ಬಂದಿ ವರ್ಗ ಮತ್ತಿತರರು ಧರಣಿಯಲ್ಲಿ ಉಪಸ್ಥಿತರಿದ್ದರು.