ತರೀಕೆರೆ: ತಾಪಂ ಸರ್ವ ಸದಸ್ಯರ ಸಭೆ
ತರೀಕೆರೆ, ಜೂ.10: ತಾಲೂಕು ಪಂಚಾಯತ್ ಸರ್ವ ಸದಸ್ಯರ ಸಭೆಯು ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಸಭೆಯಲ್ಲಿ ಮಾತನಾಡಿ, ಕೆಲವು ಆಸ್ಪತ್ರೆಗಳಲ್ಲಿ ಹುಚ್ಚು ನಾಯಿ ಕಡಿತದ ಲಸಿಕೆ ಕೊರತೆ ಇದ್ದರೂ ಸಹ ಖಾಸಗಿ ಮೆಡಿಕಲ್ ಸ್ಟೋರ್‌ಗಳಿಂದ ಖರೀದಿಸಿ ಚಿಕಿತ್ಸೆ ನೀಡಲಾಗಿದೆ. ತಾಲೂಕಿನಲ್ಲಿ 76ಮಂದಿ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಸಂತವೇರಿ, ಚೀರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದ ಕಾರಣ ಬೇರೆಡೆಯಿಂದ ನಿಯೋಜನೆಗೊಳಿಸಲಾಗಿದೆ. 13ಉಪ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಗಂಗಾಧರಮೂರ್ತಿ ಮಾತನಾಡಿ, ಕುಡ್ಲೂರು ಗ್ರಾಮದಲ್ಲಿ ವೈದ್ಯರಿಗಾಗಿ ನಿರ್ಮಿಸಿರುವ ವಸತಿ ಗೃಹ ಬಹಳ ವರ್ಷಗಳಿಂದ ಖಾಲಿಯಿದ್ದು, ಆಸ್ಪತ್ರೆಯ ಸಿಬ್ಬಂದಿಗೆ ವಾಸಕ್ಕೆ ನೀಡಬೇಕು ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಈಗಾಗಲೇ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆ ಇದೆ. ಸರಕಾರದಿಂದ ಬರುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಮಕ್ಕಳಿಗೆ ತಲುಪಿಸಲು ಕ್ರಮ ವಹಿಸಬೇಕು ಎಂದು ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರೋಹಿತ್ ಮಾತನಾಡಿದರು. ಹಿಂದುಳಿದ ವರ್ಗಗಳ ಇಲಾಖಾಧಿಕಾರಿ, ಸಿಡಿಪಿಒ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ವರದಿ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಿವಮ್ಮಕೃಷ್ಣಮೂರ್ತಿ, ಸದಸ್ಯರು, ಇಲಾಖಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.