ಕೆಎಸ್ಸಾರ್ಟಿಸಿ ಅಧಿಕಾರಿಗಳಿಂದ ಸರಕಾರಕ್ಕೆ ಲಕ್ಷಾಂತರ ರೂ. ವಂಚನೆ: ಆರೋಪ
ಮೂಡಿಗೆರೆ, ಜೂ.10: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದಿಂದ ಸರಕಾರಕ್ಕೆ ಪ್ರತೀ ತಿಂಗಳು ಲಕ್ಷಾಂತರ ರೂ. ವಂಚನೆಯಾಗುತ್ತಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಚ್.ಅಮರ್‌ನಾಥ್ ಆರೋಪಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಹೇಳಿಕೆ ನೀಡಿದ ಅವರು, ಚಿಕ್ಕಮಗಳೂರು ವಿಭಾಗದ ಮೂಡಿಗೆರೆ, ಕಡೂರು, ಸಕಲೇಶಪುರ, ಚಿಕ್ಕಮಗಳೂರು, ಅರಸಿಕೆರೆಯ ಡಿಪೊಗಳಿಂದ ಬೆಂಗಳೂರಿಗೆ ಪ್ರತೀ ನಿತ್ಯ 250ಕ್ಕೂ ಹೆಚ್ಚು ಬಸ್ಸ್‌ಗಳು ಸಂಚರಿಸುತ್ತವೆ. ಈ ಬಸ್ಸುಗಳಿಗೆ ಟೋಲ್ ಶುಲ್ಕಕ್ಕಾಗಿ ಪ್ರತೀ ತಿಂಗಳ ಮೊದಲ ದಿನದಿಂದ ಅಂತ್ಯದವರೆಗೆ ಮಾಸಿಕ ಪಾಸ್ ವಿತರಿಸಲಾಗುತ್ತಿದೆ. ಈ ಪಾಸ್‌ಗಳಿಗೆ ಶುಲ್ಕವನ್ನು 1ವಾರದ ಮೊದಲೆ ಟೋಲ್ ಸಂಸ್ಥೆಗೆ ಪಾವತಿಸಿ ಪಾಸ್‌ಗಳನ್ನು ಪಡೆಯಬೇಕಾಗುತ್ತದೆ ಎಂದಿದ್ದಾರೆ.
ಆದರೆ ಕೆಎಸ್ಸಾರ್ಟಿಸಿ 5ಡಿಪೋಗಳ ವ್ಯವಸ್ಥಾಪಕರು, ಲೆಕ್ಕಾಧಿಕಾರಿಗಳು ಹಾಗೂ ವಿಭಾಗ ಮಟ್ಟದ ಹಿರಿಯ ಅಧಿಕಾರಿಗಳು ಶಾಮಿಲಾಗಿ ಪಾಸ್ ನವೀಕರಣವನ್ನು ಪ್ರತಿ ತಿಂಗಳು 2, 3, 4, ಹಾಗೂ 7ದಿನಗಳ ಕಾಲ ತಡವಾಗಿ ನವೀಕರಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಟೋಲ್ ಶುಲ್ಕವನ್ನು ನಿರ್ವಾಹಕರು ನಗದು ರೂಪದಲ್ಲಿ ನೀಡುತ್ತಾರೆ. ಒಂದು ಬಸ್ಸ್‌ಗೆ ಕನಿಷ್ಠ 937 ರೂ. ಪಾವತಿಸಿದರೆ ಪ್ರತಿ ದಿನ 2ಲಕ್ಷ ರೂ. ಸಂಸ್ಥೆಗೆ ನಷ್ಟವಾಗುತ್ತದೆ. ಅಂದರೆ ಪ್ರತಿ ತಿಂಗಳು ಕೇವಲ ಚಿಕ್ಕಮಗಳೂರು ವಿಭಾಗದಿಂದ ಸರಕಾರಕ್ಕೆ 15 ಲಕ್ಷ ರೂ. ಗೂ ಹೆಚ್ಚು ನಷ್ಟ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ಅಲ್ಲದೆ ಮಾಸಿಕ ರೂಪದಲ್ಲಿ ಹಾಗೂ ನಗದು ಲೆಕ್ಕದಲ್ಲಿ 2ಬಾರಿ ಹಣ ಪಾವತಿಯಾಗುತ್ತದೆ. ನಂತರದ ಹೆಚ್ಚುವರಿ ಪಾವತಿ ಹಣವನ್ನು ಸಂಸ್ಥೆಯ ಅಧಿಕಾರಿಗಳು ಟೋಲ್ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆ. ಪಾಸ್ ನವೀಕರಣ ಕಡ್ಡಾಯವಾಗಿ ತಿಂಗಳ ಯಾವುದೇ ದಿನಾಂಕದಂದು ನವೀಕರಿಸಿದರೂ ಅದರ ಅವಧಿ ಪ್ರತಿ ತಿಂಗಳ 1ರಿಂದ 30ರವರೆಗೆ ಮಾತ್ರ ಇರುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ತನಿಖೆ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ಕೈಗೊಂಡು ಉಂಟಾಗಿರುವ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.