×
Ad

ಕಲ್ಲು ಗಣಿ ಮೇಲೆ ದಾಳಿ: ಅಪಾರ ಪ್ರಮಾಣದ ಸ್ಫೋಟಕ ವಸ್ತು ವಶ

Update: 2016-06-10 23:24 IST

ಶಿವಮೊಗ್ಗ, ಜೂ. 10: ಕಲ್ಲು ಗಣಿಯೊಂದರ ಮೇಲೆ ದಿಢೀರ್ ದಾಳಿ ನಡೆಸಿದ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಹೊರವಲಯ ಇಂದಿರಾನಗರ ಸಮೀಪದ ಮಳಲಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಈ ವೇಳೆ ಕಲ್ಲು ಗಣಿಯ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 400 ಜಿಲೆಟಿನ್ ಕಡ್ಡಿ ಹಾಗೂ ಅಮೋನಿಯಂ, ನೈಟ್ರೇಟ್ ರಾಸಾಯನಿಕ ವಸ್ತುಗಳನ್ನು ಭರ್ತಿ ಮಾಡಿ ಕಲ್ಲುಬಂಡೆಗಳ ಸ್ಪೋಟಕ್ಕೆ ಸಿದ್ಧಪಡಿಸಿಡಲಾಗಿದ್ದ ನೂರಾರು ಸ್ಫೋಟಕ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಲ್ಲು ಬಂಡೆಗಳನ್ನು ಸ್ಫೋಟಿಸುವ ಉದ್ದೇಶ ದಿಂದ ಈ ಸ್ಫೋಟಕ ವಸ್ತು

ಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದ್ದು, ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಅಯ್ಯಪ್ಪ, ರಂಗಸ್ವಾಮಿ ಸೇರಿದಂತೆ ಹಲವರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಡಾ. ರಾಮ್ ಎಲ್. ಅರೆಸಿದ್ದಿ, ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್ ಗಂಗಾಧರಪ್ಪ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News