ಹಾಸನ: 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಹಾಸನ,ಜೂ.11: 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 8 ಠಾಣೆಗಳಲ್ಲಿ ಒಟ್ಟು 16 ಪ್ರಕರಣಗಳನ್ನು ಹೊಂದಿದ್ದ ಆರೋಪಿ ಷಡಕ್ಷರಿ(53) ಎಂಬಾತನನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ವಿ.ಜೆ. ಶೋಭಾರಾಣಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿ ಸುಮಾರು 27 ವರ್ಷಗಳಿಂದ ತಲೆಮರಿಸಿಕೊಂಡಿದ್ದ. ಆರೋಪಿ ಪತ್ತೆಗಾಗಿ ಎಸ್ಪಿ ರಾಹುಲ್ ಕುಮಾರ್ ಮಾರ್ಗದರ್ಶನದಲ್ಲಿ ಅರಸೀಕೆರೆ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ದಶರಥಮೂರ್ತಿ ನಿರ್ದೇಶನದಲ್ಲಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಸದಾನಂದ ತಿಪ್ಪಣ್ಣ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಮೈಸೂರು ಮತ್ತು ಮೇಲುಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಯ ತಿಪಟೂರು ನಗರ ಠಾಣೆ, ಗೋವಿನಕೆರೆ, ದಂಡಿನಶಿವರ, ತುರುವೇಕೆರೆ, ಯಡಿಯೂರುಗಳಲ್ಲಿ 8 ಪೊಲೀಸ್ ಠಾಣೆ ಹಾಗೂ 10 ಪ್ರಕರಣಗಳಲ್ಲಿ ದಾಖಲಾಗಿರುವುದು ತಿಳಿದು ಬಂದಿದೆ. ಈತನ ಬಗ್ಗೆ ಹೆಚ್ಚಿನ ವಿವರ ತನಿಖೆಯ ಮೂಲಕ ತಿಳಿದುಬರಬೇಕಾಗಿದೆ ಎಂದರು.
ಹಗಲು-ರಾತ್ರಿ ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, ಅವರಿಂದ ಕಳವುಗೊಂಡ 5 ಲಕ್ಷದ 21 ಸಾವಿರ ರೂ. ಬೆಲೆ ಬಾಳುವ 252 ಗ್ರಾಂ ತೂಕದ ಚಿನ್ನಾಭರಣವನ್ನು ಮತ್ತು 2,158 ರೂ. ವೌಲ್ಯದ 51.390 ಗ್ರಾಂ ಬೆಳ್ಳಿ ಕಾಲು, ಚೈನನ್ನು ವಶಪಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಗಾರೆ ಕೆಲಸ ಮಾಡುವ ಆಡುವಳ್ಳಿ ಗ್ರಾಮದ ಅಶೋಕ್ ಬಡಾವಣೆ ನಿವಾಸಿ ವಿಜಯಕುಮಾರ್ (30). ಶಾಂತಿಗ್ರಾಮದ ಬಳಿ ವಾಹನ ತಪಾಸಣೆ ಮಾಡುವಾಗ ಅನುಮಾನಸ್ಪದವಾಗಿ ಕಂಡು ಬಂದ ವ್ಯಕ್ತಿಯನ್ನು ವಿಚಾರಣೆ ಮಾಡಲು ಹೋದಾಗ ತಪ್ಪಿಕೊಳ್ಳಲು ಪ್ರಯತ್ನಿಸಿದ್ದ. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮನೆಗಳ್ಳತನದ ಬಗ್ಗೆ ತಿಳಿದು ಬಂದಿದೆ ಎಂದು ಹೇಳಿದರು. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದರು.