ಸರಕಾರದ ವತಿಯಿಂದ ಎಲ್‌ಕೆಜಿ-ಯುಕೆಜಿ ಉತ್ತಮ ಬೆಳವಣಿಗೆ: ಹಕ್ರೆ
ಸಾಗರ, ಜೂ.11: ಪ್ರಾಥಮಿಕ ಶಾಲೆಗಳ ಜೊತೆಯಲ್ಲಿ ಸರಕಾರದಿಂದಲೇ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವ ನಿಟ್ಟಿನಲ್ಲಿ ತಾಲೂಕಿನಾಧ್ಯಂತ ಹಮ್ಮಿಕೊಳ್ಳಲಾಗಿದ್ದ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಶಿಕ್ಷಣ ಸಚಿವರ ನೀಡಿರುವ ಭರವಸೆ ಆಶಾದಾಯಕ ಬೆಳವಣಿಗೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದ್ದಾರೆ. ಇಲ್ಲಿನ ಅಜಿತ ಸಭಾಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಿನ್ಸ್ ವೆಲ್‌ಫೇರ್ ಸೊಸೈಟಿ ಹಾಗೂ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿ ವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸರಕಾರ ಬಡ ವಿದ್ಯಾರ್ಥಿಗಳ ಅನು ಕೂಲ ಕ್ಕಾಗಿ ಹಾಗೂ ಶಿಕ್ಷಣದಲ್ಲಿನ ತಾರತಮ್ಯನೀತಿ ನಿವಾರಣೆಗಾಗಿ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೊಳಿ ಸಿರುವುದು ಉತ್ತಮ ಬೆಳವಣಿಗೆ. ಇದರ ಜೊತೆಗೆ ಉಚಿತ ಪುಸ್ತಕ, ಬಿಸಿಯೂಟ, ಸಮವಸ್ತ್ರ, ಬೈಸಿಕ ಲ್ ವಿತರಣೆಯಂತಹ ಯೋಜನೆ ವಿದ್ಯಾರ್ಥಿ ಸ್ನೇಹಿಯಾಗಿದೆ ಎಂದರು. ಕೆಲವು ಅಧಿಕಾರಿಗಳು ಕಡ್ಡಾಯ ಶಿಕ್ಷಣ ನೀತಿಯನ್ನು ಭ್ರಷ್ಟಾಚಾರಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಅಂತವರ ವಿರುದ್ಧ ಕ್ರಮಕ್ಕೆ ಶಿಕ್ಷಣಾಧಿ ಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದರು. ಸರಕಾರದ ಜೊತೆ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅಗತ್ಯವಾದ ಪರಿಕರಗಳನ್ನು ವಿತರಣೆ ಮಾಡುವುದು ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಬಂಡವಾಳ ಮಾಡಿಕೊಂಡು ವ್ಯವಹಾರ ನಡೆಸುತ್ತಿದೆ. ಪೋಷಕರ ಶ್ರೀಮಂತಿಕೆ, ಹಣಕಾಸು ವಹಿವಾಟು ಗಮನದಲ್ಲಿಟ್ಟುಕೊಂಡು ಶಾಲೆ ಕಾಲೇಜುಗಳು ಸೀಟು ಹಂಚಿಕೆ ಮಾಡುತ್ತಿರುವುದು ಶಿಕ್ಷಣ ಕ್ಷೇತ್ರದ ದುರಂತವಾಗಿದೆ ಎಂದ ಅವರು, ಇಂತಹಾ ಭ್ರಷ್ಟಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್ ಮಿಂಚಿನ ಕಾರ್ಯಾಚರಣೆ ನಡೆಸಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಜೋಷಿ ಫೌಂಡೇಶನ್ ಅಧ್ಯಕ್ಷ ಅಬಸೆ ದಿನೇಶ ಕುಮಾರ್ ಎನ್. ಜೋಷಿ ಮಾತನಾಡಿ, ಆಧುನಿಕ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳನ್ನು ಬೌದ್ಧಿಕವಾಗಿ ಪ್ರಬುದ್ಧಗೊಳಿಸುತ್ತಿದೆ ಹೊರತು. ಅವರಲ್ಲಿ ಸಂಸ್ಕಾರ ಬಿತ್ತುವ ಕೆಲಸ ಮಾಡುತ್ತಿಲ್ಲ. ಪೋಷಕರು ಸಹ ಅಂಕದ ಹಿಂದೆ ಬಿದ್ದು, ಮಕ್ಕಳ ಮೇಲೆ ಇನ್ನಿಲ್ಲದ ಹೊರೆ ಹೇರುತ್ತಿದ್ದಾರೆ. ಇದು ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳುವ ವಿಚಾರದಿಂದ ದೂರ ಉಳಿಯುವಂತೆ ಮಾಡಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಧರ್ ಭಟ್ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಿನ್ಸ್ ವೆಲ್‌ಫೇರ್ ಸೊಸೈಟಿ ಹಾಗೂ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.