×
Ad

ಅಕ್ರಮ ಮರಳು ಸಾಗಾಟಕ್ಕೆ ತಾಲೂಕು ಆಡಳಿತದ ಬೆಂಬಲ

Update: 2016-06-11 23:19 IST

 ತೀರ್ಥಹಳ್ಳಿ, ಜೂ.11: ಇಲ್ಲಿನ ಹುಣಸವಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆೆಗೆ ದಾರಿ ನೀಡಬೇಕೆಂದು ತಹಶೀಲ್ದಾರ್ ಮೂಲಕ ಒಂದು ಕುಟುಂಬದ ಕೆಲವರು ಒತ್ತಡ ಹಾಕುತ್ತಿದ್ದಾರಲ್ಲದೆ, ದಾರಿಯ ವಿಚಾರವಾಗಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಆಡಳಿತ ವರ್ಗದವರಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಹೊನ್ನಾನಿ ಗ್ರಾಮಸ್ಥರು ಆಪಾದಿಸಿದ್ದಾರೆ.

ಹುಣಸವಳ್ಳಿ ಗ್ರಾಮದ ಹೊನ್ನಾನಿ ಸ.ನಂ.80ರಲ್ಲಿ ಸುಮಾರು 103 ಎಕರೆ ಮಂಜೂರಾದ ಜಮೀನಿದ್ದು ಇದರಲ್ಲಿ ಹಲವು ಮಂದಿ ಸಾಗುವಳಿ ಮಾಡಿಕೊಂಡಿದ್ದಾರೆ. ಈ ಹಿಂದೆ ದಾರಿಯ ಸಮಸ್ಯೆ ಉಂಟಾದಾಗ ರಾಜೇಶ್ ಎಂಬವರು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಸರ್ವೇ ಮಾಡಿಸಿ ಎಲ್ಲರ ಜಮೀನುಗಳಿಗೂ ಸಂಪರ್ಕ ಇರುವಂತಹ ಒಂದು ಮುಖ್ಯ ರಸ್ತೆಯನ್ನು ಅಧಿಕೃತವಾಗಿ ಮಾಡಿಸಿಕೊಟ್ಟು ಸಮಸ್ಯೆ ಪರಿಹಾರ ಮಾಡಿದ್ದರು.

ಆದರೆ, ಇದೀಗ ಆ ದಾರಿಯನ್ನು ಮುಚ್ಚಿರುವ ಒಂದೇ ಕುಟುಂಬದ ಕೆಲವರು, ಅದರ ಬದಲಾಗಿ ದಲಿತರ ಸಾಗುವಳಿ ಭೂಮಿಯಲ್ಲಿರುವ ದಾರಿಯನ್ನು ಬಿಟ್ಟು ಕೊಡಬೇಕೆಂದು ಹಾಗೂ ಅಲ್ಲಿ ಅಕ್ರಮ ನಡೆದಿದೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಈಗ ಬಿಟ್ಟುಕೊಡಬೇಕೆಂದು ಹೇಳುತ್ತಿರುವ ದಾರಿ ಕೇವಲ ಅಕ್ರಮ ಮರಳು ಸಾಗಾಟಕ್ಕೆ ದಾರಿ ಮಾಡುವ ಏಕೈಕ ಉದ್ದೇಶದಿಂದ ಒತ್ತಾಯಿಸಲಾಗುತ್ತಿದೆ. ನಕಾಶೆಯಲ್ಲಿ ಕಂಡ ರಸ್ತೆಯ ಬದಲು ಈ ರಸ್ತೆಯನ್ನು ಬಿಟ್ಟುಕೊಡಬೇಕೆಂದು ಹೇಳಿರುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಸಾಗುವಳಿ ಮಾಡುತ್ತಿರುವ ಗ್ರಾಮಸ್ಥರು ಅಭಿಪ್ರಾಯ ಹಂಚಿಕೊಂಡರು.

 ಗ್ರಾಮಸ್ಥರೊಂದಿಗೆ ಇಲ್ಲಿನ ಕಸಬಾ ಸಹಕಾರಿ ಸಂಘದ ಅಧ್ಯಕ್ಷ ಹೊನ್ನಾನಿ ರಾಜ್‌ಕಮಲ್, ಹಾರೋಗೊಳಿಗೆ ವಿಶ್ವನಾಥ್, ಮಾಜಿ ಗ್ರಾಪಂ ಸದಸ್ಯ ಭಾಸ್ಕರ್ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News