ಡಿಸಿ, ಎಸ್ಪಿಯನ್ನು ಭೇಟಿಯಾದ ಸೌಹಾರ್ದ ವೇದಿಕೆ
ಮಡಿಕೇರಿ, ಜೂ.11: ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೊಡಗು ಸೌಹಾರ್ದ ವೇದಿಕೆಯ ಅಧ್ಯಕ್ಷ, ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಭೇಟಿ ಮಾಡಿ ದೇವಟ್‌ಪರಂಬು ಹೆಸರಿನಲ್ಲಿ ಜನಾಂಗೀಯ ಸಂಘರ್ಷಕ್ಕೆ ಎಡೆ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಅಕ್ರಮವಾಗಿ ನೆಟ್ಟಿರುವ ಕಲ್ಲುಗಳನ್ನು ವಶಪಡಿಸಿಕೊಳ್ಳಬೇಕು ಅಲ್ಲದೆ ಅಕ್ರಮಕ್ಕೆ ಕಾರಣಕರ್ತರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿತು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಅಶಾಂತಿ ಉಂಟು ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಕಾನೂನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು, ವಿವಾದಿತ ಸ್ಥಳದಲ್ಲಿರುವ ಕಲ್ಲುಗಳನ್ನು ವಶಪಡಿಸಿಕೊಳ್ಳಲು ಇಲಾಖೆ ಕ್ರಮಕೈಗೊಳ್ಳುತ್ತಿದೆ. ಇನ್ನು ಮುಂದೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ನಿಯೋಗದಲ್ಲಿ ಮಾಜಿ ಶಾಸಕ ಎಚ್.ಡಿ ಬಸವರಾಜು, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಡಿ.ಎಸ್.ಆನಂದ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ವಕೀಲ ಕೆ.ಆರ್. ವಿದ್ಯಾಧರ, ಚೇರಂಡ ನಂದ ಸುಬ್ಬಯ್ಯ, ಕುಡಿಯರ ಮುತ್ತಪ್ಪ, ಕುಯ್ಯಮುಡಿ ಮನೋಜ್, ಪಿ.ಜಿ.ಅಯ್ಯಪ್ಪ, ವಿ.ಪಿ.ಶಶಿಧರ್, ಕುದ್ಕುಳಿ ಭರತ್‌ಉಪಸ್ಥಿತರಿದ್ದರು.