×
Ad

ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಲಭಿಸದ ಸುಂಟಿಕೊಪ್ಪ ನೂತನ ಸಪಪೂ ಕಾಲೇಜು ಕಟ್ಟಡ

Update: 2016-06-12 23:13 IST

ಸುಂಟಿಕೊಪ್ಪ, ಜೂ. 12: ಸುಂಟಿಕೊಪ್ಪಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ನಿರ್ಮಾಣಗೊಂಡು ವರ್ಷಗಳು ಕಳೆದರೂ ಕಾಲೇಜು ತೆರೆಯದೆ ಕಟ್ಟಡ ನನೆಗುದಿಗೆ ಬಿದ್ದಿದೆ.

   ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಕಟ್ಟಡದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢ ಶಾಲೆ, ಸರಕಾರಿ ಪಪೂ ಕಾಲೇಜು ಒಂದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಮಳೆಗಾಲದಲ್ಲಿ ತೀವ್ರ ತೊಂದರೆಯ ನಡುವೆ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು.

 ಸ್ಥಳೀಯರ ಒತ್ತಾಯದ ಮೇರೆಗೆ ಶಾಸಕ ಅಪ್ಪಚ್ಚು ರಂಜನ್, ಉಲುಗುಲಿಮಾರುಕಟ್ಟೆ ರಸ್ತೆಯ ಸಮೀಪದಲ್ಲಿರುವ ಶಿಕ್ಷಣ ಇಲಾಖೆಗೆ ಸೇರಿದ, ಈ ಹಿಂದೆ ಸರಕಾರಿ ಉರ್ದು ಶಾಲೆ ನಡೆಯುತ್ತಿದ್ದ, ಆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳುವುದನ್ನು ಮನಗಂಡು ಸರಕಾರಿ ಪಪೂ ಕಾಲೇಜು ಸ್ಥಾಪಿಸಲು 2011ರ ಜನವರಿ 29ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಲೋಕೋಪಯೋಗಿ ಬಂದರು ಹಾಗೂ ಒಳನಾಡು ಇಲಾಖೆ, ನಬಾರ್ಡ್ ಆರ್‌ಐಡಿಎಫ್ ನ 11ನೆ ಹಣಕಾಸು ಯೋಜನೆಯಡಿ ಸುಮಾರು 21 ಲಕ್ಷ ರೂ.ವೆಚ್ಚದಲ್ಲಿ ಕಾಲೇಜು ಕಟ್ಟಡಕ್ಕೆ ಅನುದಾನ ಲಭ್ಯವಾಗಿತ್ತು.

  ಉಲುಗುಲಿ ರಸ್ತೆಯಲ್ಲಿ ಕಳೆದ 5-6 ವರ್ಷಗಳಿಂದ ಪಿಯು ಕಾಲೇಜು ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಇನ್ನೂ ಕೊಠಡಿ ಕಾಮಗಾರಿ ಪೂರ್ಣಗೊಂಡಿಲ್ಲ ಹಾಗೂ ಇಲ್ಲಿನ ಜನ ಪ್ರತಿನಿಧಿಗಳು ಸಹ ಆಸಕ್ತಿ ವಹಿಸಿದಂತಿಲ್ಲ.

   ಕೊಠಡಿ ಕಾಮಗಾರಿಯಲ್ಲಿ ಶೇ.90ರಷ್ಟು ಕೆಲಸ ಮುಗಿದಿದ್ದರೂ, ವಿದ್ಯಾರ್ಥಿಗಳಿಗೆ ಬೇಕಾದ ಶೌಚಾಲಯದ ಕಾಮಗಾರಿ ಇನ್ನು ನಡೆದಿಲ್ಲ. ಒಟ್ಟಾರೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಕಾಲೇಜು ವಿದ್ಯಾರ್ಥಿಗಳು ಹಳೆಯ ಕಾಲೇಜಿನ ಕೊಠಡಿಯಲ್ಲೇ ಪಾಠ, ಪ್ರವಚನದಲ್ಲಿ ತೊಡಗಿರುವುದಕ್ಕೆ ಸ್ಥಳೀಯರು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ನಿರ್ಮಾಣವಾಗಿರುವ ನೂತನ ಸರಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡಕ್ಕೆ ಆದಷ್ಟು ಬೇಗ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  

ಕೊಡಗು ಜಿಲ್ಲಾ ಉಸುವಾರಿ ಸಚಿವ ದಿನೇಶ್ ಗುಂಡೂರಾವ್, ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸ್ಥಳೀಯ ನೂತನ ಜಿಪಂ ಜನಪ್ರತಿನಿಧಿಗಳು, ಕೆ.ಪಿ. ಚಂದ್ರಕಲಾ, ತಾಪಂ ಸದಸ್ಯರು ಮತ್ತು ಗ್ರಾಪಂ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News