ಹಾಸನ: ಅಕ್ರಮ ಕಲ್ಲುಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಧರಣಿ
ಹಾಸನ, ಜೂ. 13: ಅಕ್ರಮ ಕಲ್ಲುಗಣಿಗಾರಿಕೆಯನ್ನು ಕೂಡಲೇ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಇತರೆ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೂ ತೆರಳಿತು.
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬೆಟ್ಟದಹಳ್ಳಿ ಸುತ್ತಮುತ್ತ ಸ್ಟೋನ್ ಕ್ರಷರ್ ನಡೆಸಲು 4ಕ್ಕೆ ಮಾತ್ರ ಪರವಾನಿಗೆ ಪಡೆದು 8ಕ್ಕೂ ಹೆಚ್ಚು ಗಣಿಗಾರಿಕೆಗೆ ಪರವಾನಿಗೆ ಕೊಟ್ಟಿದೆ. ಆದರೆ 60 ಎಕರೆಗೂ ಹೆಚ್ಚು ಭಾಗದಲ್ಲಿ ನೆಲದಿಂದ ಎರಡು ಮೀಟರ್ ಗಣಿಗಾರಿಕೆಗೆ ಅನುಮತಿ ನೀಡಿದೆ ಎಂದರು. ಈ ಭಾಗಗಳಲ್ಲಿ 20 ಮೀಟರ್‌ಗೂ ಹೆಚ್ಚಿನ ಆಳ ತೋಡಿ ಮಿನಿ ಡ್ಯಾಂ ರೀತಿ ಕಂದಕಗಳು ಏರ್ಪಟ್ಟಿದೆ ಎಂದು ದೂರಿದರು. 2011ರ ಮೊದಲು ಗಣಿಗಾರಿಕೆ ಬಗ್ಗೆ ಬಿಗಿಯಾದ ಕಾನೂನುಗಳಿದ್ದು, ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪರ ಕಾಲದಲ್ಲಿ ನಿಯಮಗಳು ಅತ್ಯಂತ ಸಡಿಲವಾಗಿದ್ದು, ಗಣಿಗಾರಿಕೆ ನಡೆಸುವವರಿಗೆ ಅನುಕೂಲಕರವಾಗಿತ್ತು. ಇದನ್ನು ತಿದ್ದುಪಡಿ ಮಾಡಿ ಬಿಗಿಯಾದ ನಿಯಮವನ್ನು ಜಾರಿಗೆ ತರಲು ಆಗ್ರಹಿಸಿದರು.
ಪರವಾನಿಗೆ-ತರಬೇತಿ ಇಲ್ಲದ ಬ್ಲಾಸ್ಟರ್‌ಗಳಿಂದ ಬ್ಲಾಸ್ಟ್ ಮಾಡಿದ ಪರಿಣಾಮ ಒಬ್ಬ ಶಾಲಾ ಬಾಲಕ ಸಾವನಪ್ಪಿದ್ದು, ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದರು. ಮತ್ತು ಒಬ್ಬ ಬ್ಲಾಸ್ಟ್ ಮಾಡುವ ಹುಡುಗ ಸಾವನಪ್ಪಿದ್ದಾನೆ ಎಂದು ಆರೋಪಿಸಿದರು.
ಕಳೆದ 25 ವರ್ಷಗಳಿಂದ ಅಕ್ರಮ ಗಣಿಗಾರಿಕೆಯು ಶ್ರವಣಬೆಳಗೊಳ ಸುತ್ತಮುತ್ತ ನಡೆಯುತ್ತಿದೆ. 50 ಸಾವಿರ ಕೋಟಿ ರೂ. ವೌಲ್ಯದ ಕಲ್ಲನ್ನು ಅನಧಿಕೃತವಾಗಿ ತೆಗೆಯಲಾಗಿದೆ. ಇದಕ್ಕೆಲ್ಲಾ ಜಿಲ್ಲಾಡಳಿತ, ಭೂ ಮತ್ತು ಗಣಿಗಾರಿಕೆ ಇಲಾಖೆ ನೇರ ಹೊಣೆ. 25 ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಓಡಿ ಇಲ್ಲವೇ ನ್ಯಾಯಾಂಗ ತನಿಖೆಯಾಗಬೇಕು. ಅಕ್ರಮವಾಗಿ ದೊಚಿರುವುದನ್ನು ವಸೂಲಿ ಮಾಡಿ ಅವರಿಗೆ ಶಿಕ್ಷೆ ನೀಡಬೇಕು. ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ತಕ್ಷಣ ದೂರು ಸಲ್ಲಿಸಿ ಬಂಧಿಸದಿದ್ದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವುದಿಲ್ಲ. ಸರಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಟನೆ ನಡೆಸುತ್ತಿರುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಭಾರತ್ ಕಮ್ಯೂನಿಸ್ಟ್ ಪಕ್ಷ, ಮಾದಿಗ ದಂಡೋರ, ಕರ್ನಾಟಕ ಪ್ರಾಂತ ರೈತ, ದಲಿತ ಮಾನವ ಹಕ್ಕುಗಳ ಹೋರಾಟ ಸಮಿತಿ, ಮಲೆನಾಡು ಜನಪರ ಹೋರಾಟ ಸಮಿತಿ, ಭೂಮಿ ಉಳಿಸಿ ಆಂದೋಲನಾ ಸಮಿತಿ, ಜೀವ ವೈವಿದ್ಯ ಸಂರಕ್ಷಣೆ ಮತ್ತು ಸಂಶೋಧನ ಟ್ರಸ್ಟ್ ಇತರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಪ್ರತಿಭಟನೆಯ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಹಳೆಯದಾದ ಬೃಹತ್ ಮರದ ಕೊಂಬೆಯೊಂದು ಕೆಳಗೆ ಬಿದ್ದ ಪರಿಣಾಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಸಂಘದ 3 ಜನ ಮಹಿಳೆಯರಿಗೆ ಗಾಯಗಳಾಗಿವೆ.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರ್ ಶ್ರೀನಿವಾಸ್, ರಾಜ್ಯ ಉಪಾಧ್ಯಕ್ಷ ಜಿ.ಟಿ. ರಾಮಸ್ವಾಮಿ, ದಲಿತ ಮುಖಂಡ ನಾರಾಯಣದಾಸ್, ರಾಜ್ಯ ಸಂಯೋಜಕ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರ್ ಸ್ವಾಮಿಗೌಡ, ಖಜಾಂಚಿ ಹಿರಿಸಾವೆ ರಘು, ಕರ್ನಾಟಕ ಪ್ರಾಂತ ರೈತ ಸಂಘದ ನವೀನ್ ಕುಮಾರ್, ಧರ್ಮೇಶ್, ದಸಂಸ ಮುಖಂಡ ಅಬ್ದೂಲ್ ಸಮದ್, ಸಿಪಿಐ ಮುಖಂಡ ಎಂ.ಸಿ. ಡೋಂಗ್ರೆ, ಪರಿಸರವಾದಿ ಸಿ.ಎಲ್. ಅಶೋಕ್ ಇತರರು ಇದ್ದರು.