ಎಂಎಲ್ಸಿ ಅನುದಾನದಲ್ಲಿ ಗ್ರಾಪಂಗಳಿಗೆ ಜನರೇಟರ್: ಪ್ರಾಣೇಶ್
ಕಡೂರು, ಜೂ.13: ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಪತ್ರಿ ಗ್ರಾಪಂಗೆ ಒಂದು ಜನರೇಟರ್ ವ್ಯವಸ್ಥೆ ಕಲ್ಪಿಸುವ ಚಿಂತನೆಯನ್ನು ಪಕ್ಷದ ಸಭೆೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಎಂಎಲ್ಸಿ ಎಂ.ಕೆ. ಪ್ರಾಣೇಶ್ ತಿಳಿಸಿದರು.
ಅವರು ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ಖಾಸಗಿಯಾಗಿ ಆರಂಭಿಸಿರುವ ಶುದ್ಧ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು. ಚುನಾವಣೆಯ ಮೊದಲು ತೀರ್ಮಾನಿಸಿದಂತೆ ಜಿಲ್ಲೆಯ ಪ್ರತಿ ಗ್ರಾಪಂಗಳಿಗೂ ಪರಿಷತ್ ಸದಸ್ಯರ ಅನುದಾನ ತಲುಪಬೇಕು ಎಂಬ ಪಕ್ಷದ ತೀರ್ಮಾನದಂತೆ ಅನುದಾನವನ್ನು ನೀಡಲು ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಅದರಂತೆ ಪ್ರತೀ ಗ್ರಾಪಂಗೆ ವಿದ್ಯುತ್ ಸಮಸ್ಯೆ ಎದುರಾದಾಗ ನೀರಿನ ಸಮಸ್ಯೆ ಉಂಟಾಗದಂತೆ ಜನರೇಟರ್ ವ್ಯವಸ್ಥೆ ಮತ್ತು ಒಂದು ಅಶ್ವಶಕ್ತಿಯ ಮೋಟಾರ್ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ತಮ್ಮ ಅನುದಾನ ಜಿಲ್ಲೆಯ 224 ಗ್ರಾಮ ಪಂಚಾಯತ್‌ಗಳಿಗೂ ಲಭ್ಯವಾಗಬೇಕು ಎಂಬ ದೂರದೃಷ್ಟಿಯ ಚಿಂತನೆ ಇದಾಗಿದೆ. ಪಕ್ಷದ ಸಾಮಾಜಿಕ ಚಿಂತನೆಯಂತೆ ಮೊದಲ ಹಂತದಲ್ಲಿ ಕಡೂರು ತಾಲೂಕಿನ 20 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ತರೀಕೆರೆ ಮಾಜಿ ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಜನ ಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎಂಬ ಚಿಂತನೆಯಿಂದ ಚಿಕ್ಕನಲ್ಲೂರು ಗ್ರಾಮದಲ್ಲಿ ಕಲ್ಲೇಶ್ವರ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿರುವುದು ಶ್ಲಾಘನೀಯ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಜಿಪಂ ಸದಸ್ಯ ಕೆ.ಆರ್. ಆನಂದಪ್ಪ, ವಿಜಯಕುಮಾರ್, ತಾಪಂ ಸದಸ್ಯ ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷೆ ಹೊನ್ನಮ್ಮ, ಸದಸ್ಯರಾದ ಮಂಜುಳಾ, ಕ್ಷೇತ್ರಪಾಲ್, ಬಿಜೆಪಿ ಮುಖಂಡ ನವೀನ್‌ಕುಮಾರ್, ಚಿಕ್ಕದೇವನೂರು ರವಿ, ಮಂಗಳ ನವೀನ್‌ಕುಮಾರ್ ಉಪಸ್ಥಿತರಿದ್ದರು.