ಕಾರವಾರ ನಗರಸಭೆಯ ಸಾಮಾನ್ಯ ಸಭೆ
ಕಾರವಾರ, ಜೂ.13: ಕಸ ವಿಲೇವಾರಿ ಸಮಸ್ಯೆ, ಕೋಡಿಭಾಗ ರಸ್ತೆ ಅಗಲೀಕರಣ, ಮೀನುಮಾರುಕಟ್ಟೆ ಗೊಂದಲ ನಿವಾರಣೆಯ ಕುರಿತು ನಗರಸಭೆಯಲ್ಲಿ ಸೋಮವಾರ ಸಭೆ ನಡೆದು, ಕೆಲ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಕಾರವಾರ ಕೋಡಿಭಾಗ ರಸ್ತೆ ಅಗಲೀಕರಣ ಹಾಗೂ ಮೀನುಗಾರರಿಗೆ ಶಾಶ್ವತ ಮೀನು ಮಾರುಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸ್ಥಳೀಯ ಶಾಸಕ ಸತೀಶ್ ಸೈಲ್ ಮಧ್ಯಪ್ರವೇಶಿಸಿದರು.
ಚರ್ಚೆಯ ನಂತರ ರಸ್ತೆ ಅಗಲೀಕರಣ ವಿಷಯದಲ್ಲಿ ಎಲ್ಲರಿಗೂ ಒಂದೇ ಬಗೆಯ ನ್ಯಾಯ ನೀಡಬೇಕು. ಕೆಲವೆಡೆ 14ಮೀ. ಹಾಗೂ ಕೆಲವೆಡೆ 18ಮೀ. ನಂತೆ ರಸ್ತೆ ಅಗಲೀಕರಣ ನಡೆಯುತ್ತಿದ್ದು, ಇದಕ್ಕಾಗಿ ಈಗಾಗಲೇ ಹಲವರ ಮನೆ, ಮಳಿಗೆಗಳನ್ನು ಧ್ವಂಸ ಮಾಡಲಾಗಿದೆ. ಕೆಲವರಿಗೆ ಮಾತ್ರ ವಿನಾಯಿತಿ ನೀಡಲಾಗುತ್ತಿದೆ. ಈ ಬಗೆಯ ತಾರತಮ್ಯ ಸಲ್ಲದು ಎಂದು ಸದಸ್ಯ ಪ್ರೇಮಾನಂದ ಗುನಗಾ ಆಕ್ಷೇಪಿಸಿದರು.
ಎಲ್ಲ್ಲೆಡೆ 18ಮೀ. ಅಗಲೀಕರಣ ಕಡ್ಡಾಯ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಹೃದಯಭಾಗದಲ್ಲಿರುವ ಮೀನು ಮಾರುಕಟ್ಟೆಯನ್ನು ಧ್ವಂಸ ಮಾಡಲಾಗಿದ್ದು, ಇದೇ ಸ್ಥಳದಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಿಸುವಂತೆ ಮೀನುಗಾರರು ಒತ್ತಾಯಿಸುತ್ತಿರುವುದು ಪ್ರಸ್ತಾಪಕ್ಕೆ ಬಂದಿತು. ಸದ್ಯ ನಿರ್ಮಿಸಲಾದ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಹಾಗೂ ಮೀನುಗಾರರ ಬೇಡಿಕೆಗೆ ತಕ್ಕಂತೆ ಅತ್ಯಾಧುನಿಕ ಸೌಲಭ್ಯದ ಮತ್ಸಮಳಿಗೆ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಿತು. ಹೆಸ್ಕಾಂ ಕಚೇರಿ ಸಮೀಪ ಮೀನು ಮಾರುಕಟ್ಟೆಗೆ ಗುರುತಿಸಲಾದ ಸ್ಥಳದಲ್ಲಿ ತರಕಾರಿ ಹಾಗೂ ಹಣ್ಣು ಮಾರುಕಟ್ಟೆ ನಿರ್ಮಿಸುವ ಬಗ್ಗೆ ಚರ್ಚೆ ನಡೆದವು. ಮೊದಲಿನ ಠರಾವನ್ನು ರದ್ದುಗೊಳಿಸಿ ಹೊಸ ಠರಾವು ಬರೆಯುವಂತೆ ಶಾಸಕ ಸತೀಶ್ ಸೈಲ್ ಸೂಚಿಸಿದರು.
ಶಾಸಕರ ಆಗಮನಕ್ಕೂ ಮುನ್ನ ನಡೆದ ಚರ್ಚೆಗಳಲ್ಲಿ ನಾಮನಿರ್ದೇಶಿತ ಸದಸ್ಯರ ಮಾತುಗಳು ಜೋರಾಗಿ ಕೇಳಿಸಿದವು. ಕಸ ವಿಲೇವಾರಿ ಅಸಮಪರ್ಕವಾಗಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಘನತ್ಯಾಜ್ಯ ವಸ್ತ್ತುಗಳ ವಿಲೇವಾರಿ ಹಾಗೂ ಮನೆ ಮನೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಎಸ್ ಅಳವಡಿಸುವ ವಿಷಯದಲ್ಲಿ ಅವ್ಯವಹಾರದ ದೂರುಗಳು ಕೇಳಿ ಬಂದವು. ಹಿಂದಿನ ಅಧಿಕಾರ ಅವಧಿಯ ಬಗ್ಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಕೆಲ ಕಾಲ ಗರಂ ಆದ ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್, ತಮ್ಮ ಅವಧಿಯಲ್ಲಿ ಒಂದೇ ಒಂದು ರೂ. ಕೂಡ ಅವ್ಯವಹಾರ ನಡೆದಿಲ್ಲ ಎನ್ನುವ ಮೂಲಕ ಸಭೆಯನ್ನು ಸುಮ್ಮನಾಗಿಸಿದರು. ಇನ್ನು ಬಡವರ ಹೆಸರಿನಲ್ಲಿ ಆರೋಗ್ಯ ಸವಲತ್ತು ನೀಡುವಂತೆ ಶ್ರೀಮಂತರು ಅರ್ಜಿ ಸಲ್ಲಿಸುತ್ತಿದ್ದು, ಇದನ್ನು ತಿರಸ್ಕರಿಸುವಂತೆ ಸದಸ್ಯರು ಒತ್ತಾಯಿಸಿದರು. ನಗರಸಭೆ ಕಚೇರಿಗೆ ಸಿಸಿ ಟಿವಿ ಅಳವಡಿಸುವ ಹಾಗೂ ಇನ್ನಿತರ ಅಭಿವೃದ್ಧಿ ವಿಷಯಗಳ ಚರ್ಚೆಗಳು ನಡೆದವು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ನೇಹಾ ನಾಯ್ಕ, ಪೌರಾಯುಕ್ತ ಜತ್ತನ್ನ ಹಾಗೂ ವಿವಿಧ ವಾರ್ಡ್‌ನ ಸದಸ್ಯರು ಪಾಲ್ಗೊಂಡಿದ್ದರು.