×
Ad

ಕಳ್ಳಭಟ್ಟಿ ತಯಾರಿಕಾ ಕೇಂದ್ರಕ್ಕೆಅಬಕಾರಿ ದಾಳಿ: ಸೊತ್ತು ವಶ

Update: 2016-06-13 23:25 IST

ಹೊನ್ನಾವರ, ಜೂ.13: ಹೊನ್ನಾವರ ಉಪವಿಭಾಗ ಮತ್ತು ಶಿರಸಿ ಉಪವಿಭಾಗದ ಅಬಕಾರಿ ಇಲಾಖಾಧಿಕಾರಿಗಳು ಕಳ್ಳಭಟ್ಟಿ ತಯಾರಿಕಾ ಕೇಂದ್ರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಕುಮಟಾ ತಾಲೂಕಿನ ಕೋಳಿ ಮಂಜುಗುಣಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಕೆಗೆ 49 ತಗಡಿನ ಡಬ್ಬಿಯಲ್ಲಿ ಮತ್ತು ಬ್ಯಾರೆಲ್‌ನಲ್ಲಿ ಸಂಗ್ರಹಿಸಿಟ್ಟಿದ್ದ 1,080 ಲೀಟರ್ ಬೆಲ್ಲದ ಕೊಳೆ ಪತ್ತೆಹಚ್ಚಿ ಕಳ್ಳಭಟ್ಟಿ ತಯಾರಿಕಾ ಸಲಕರಣೆಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಕುಮಟಾ ತಾಲೂಕಿನ ಹೆಬ್ಬೈಲ್ ಗ್ರಾಮದ ದೇವರಗದ್ದೆ ಎಂಬಲ್ಲಿನ ಗುಡಿಸಲಿನಲ್ಲಿ ಅಕ್ರಮವಾಗಿ 4 ತಗಡಿನ ಡಬ್ಬಿಗಳಲ್ಲಿ ಸಂಗ್ರಹಿಸಿಟ್ಟಿದ್ದ 80 ಲೀ. ಬೆಲ್ಲದ ಕೊಳೆ ಮತ್ತು 3 ಲೀ. ಕಳ್ಳಭಟ್ಟಿ ಸಾರಾಯಿ ಹಾಗೂ ತಯಾರಿಕಾ ಸಲಕರಣೆಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪರಾರಿಯಾಗಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಸುಧೀರ್ ಕುಮಾರ್ ತಿಳಿಸಿದ್ದಾರೆ. ಅಬಕಾರಿ ನಿರೀಕ್ಷಕರಾದ ಸಿ.ಎಂ.ನೇತ್ರಾಕರ್, ಮಹೇಂದ್ರ ಎಸ್.ನಾಯ್ಕ, ದಾಮೋದರ ಎನ್.ನಾಯ್ಕ, ಉಪನಿರೀಕ್ಷಕರಾದ ಎಸ್.ರವೀಂದ್ರನಾಥ, ಕೆ.ಮನೋಹರ, ಶ್ರೀಧರ ಮಡಿವಾಳ, ರಕ್ಷಕರಾದ ಎಲ್.ವಿ.ಬೋರಕರ್, ಎನ್.ಜಿ.ಜೋಗಳೇಕರ್, ಗಜಾನನ ಎಸ್. ನಾಯ್ಕ, ಡಿ.ಬಿ.ತಳೇಕರ್, ಗೌರೀಶ್ ಎಂ.ಗೌಡ, ಎನ್.ಕೆ.ವೈದ್ಯ, ಜೀಪ್ ಚಾಲಕ ಹಮೀದ್.ಎಸ್.ಸೈಯದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News