ಕನ್ನಡಾಭಿಮಾನ ಬಿತ್ತುವ ಕೆಲಸವಾಗಲಿ: ಕಣ್ಣನ್
ಸಾಗರ, ಜೂ.13: ಕನ್ನಡಿಗರು, ಕನ್ನಡ ಭವನ ಹಾಗೂ ಕನ್ನಡ ಭಾಷೆಗೆ ಹಿಡಿದಿರುವ ಧೂಳು, ಕಸವನ್ನು ತೆಗೆದು ಕನ್ನಡಾಭಿಮಾನವನ್ನು ಬಿತ್ತುವ ಕೆಲಸವಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ‘ಸಾಹಿತ್ಯ-ಸಂಸ್ಕೃತಿ-ಸಂಸ್ಕಾರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಪ್ರಸ್ತುತ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಈ ಸ್ಥಿತಿಗೆ ಸರಕಾರವನ್ನು ಮಾತ್ರ ದೂರುವುದು ಸರಿಯಲ್ಲ. ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷಣ, ಗೋಷ್ಠಿ, ಸಮ್ಮೇಳನ ಮಾಡಿಸುವಷ್ಟಕ್ಕೆ ಸೀಮಿತವಾಗದೆ ರಾಜ್ಯದಲ್ಲಿರುವ ಎಲ್ಲ ಶಾಲೆಗಳಿಗೆ ಹೋಗಿ ಕನ್ನಡ ಕಲಿಸುವ, ಗ್ರಾಮೀಣ ಸೊಗಡನ್ನು ತಿಳಿ ಹೇಳಬೇಕು ಎಂದರು.
ಮುಂದಿನ ದಿನಗಳಲ್ಲಿ ಪರಿಷತ್ ಗ್ರಾಮ, ಮನೆಗಳಿಗೆ ತೆರಳಿ ಕನ್ನಡ ಶಾಲೆಯ ಮಕ್ಕಳಿಗೆ ಕನ್ನಡ ಕಾರ್ಯಕ್ರಮ ಆಯೋಜಿಸುವ ಮೂಲಕ ಶಾಲೆಗಳು ಮುಚ್ಚುವುದನ್ನು ತಡೆಯಬೇಕು ಎಂದರು. ಶಿಕ್ಷಣದ ಹೆಸರಿನಲ್ಲಿ ಡೊನೇಷನ್ ಹಾವಳಿ ಹೆಚ್ಚುತ್ತಿದೆ. ಅಂತರಾಷ್ಟ್ರೀಯ ಶಾಲೆ ಎಂದು ಹೆಸರಿಸಿಕೊಂಡಿರುವ ಶಾಲೆಗಳು ಕನ್ನಡ, ಸಂಸ್ಕೃತಿ, ಸಾಹಿತ್ಯವನ್ನು ನಾಶ ಮಾಡುತ್ತಿವೆೆ. ಈ ಬಗ್ಗೆ ಪರಿಷತ್ ಎಚ್ಚರ ವಹಿಸಬೇಕು. ಹಿಂದೆ ಕನ್ನಡದ ಕವಿತೆಯಲ್ಲಿ ಮಗ್ಗಿ, ಲೆಕ್ಕ ಹೇಳಿಕೊಡುತ್ತಿದ್ದರು. ಈಗ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡದ ಮಗ್ಗಿ ಕಂಪ್ಯೂಟರೀಕರಣಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದ ಮೂಲಕ ಬದುಕು ಕಟ್ಟಿಕೊಳ್ಳಬೇಕು. ವಿಜ್ಞಾಪೂರ್ಣ ಜೀವನ ನಡೆಸಲು ಸಾಧ್ಯವಿದೆ. ಕೃತಿಯನ್ನು ಬಿತ್ತಿ, ವಿಚಾರವನ್ನು ಬೆಳೆಸಿ, ನಮ್ಮ ಹೃದಯದ ಭಾವನೆಯಲ್ಲಿ ಸಾಹಿತ್ಯ ಮಿಳಿತವಾಗಬೇಕು. ಆಗ ಸಮಾಜ ಪರಿಪೂರ್ಣವಾಗಿರುತ್ತದೆ ಎಂದರು. ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಮುಚ್ಚುವ ಹಂತದಲ್ಲಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯವನ್ನು ಕಲಿತು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷತ್ ಗಮನ ಹರಿಸಬೇಕು. ಸಾಹಿತ್ಯ, ಸಂಸ್ಕೃತಿ ಅಳವಡಿಸಿಕೊಂಡಾಗ ಸಹಜವಾಗಿ ಸಂಸ್ಕಾರ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಿಸಿದರು. ಸಾಹಿತಿ ಡಾ.ಡಿಸೋಜ ಮಾತನಾಡಿ, ಬದುಕಿನಲ್ಲಿ ಸಂಸ್ಕೃತಿ, ಸಾಹಿತ್ಯ ಮತ್ತು ಸಂಸ್ಕಾರ ಇದ್ದಾಗ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಬದುಕಿನಲ್ಲಿ ಸಾಹಿತ್ಯವನ್ನು ಅಳವಡಿಸಿಕೊಳ್ಳುವ ಪ್ರಯತ್ನವೇ ಸಂಸ್ಕಾರ. ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ವ್ಯತ್ಯಾಸವಿಲ್ಲ ಎಂದರು. ಪರಿಷತ್ ಅಧ್ಯಕ್ಷ ಹಿತಕರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಉಪಾಧ್ಯಕ್ಷ ತಿರುಮಲ ಮಾವಿನಕುಳಿ, ನಾರಾಯಣಮೂರ್ತಿ, ವೆಂಕಟೇಶ್, ಆಯಿಷಾ ಬಾನು ಮತ್ತಿತರರು ಉಪಸ್ಥಿತರಿದ್ದರು.