ಶಿವಮೊಗ್ಗ: ವಿಶೇಷ ಸಭೆೆಯಲ್ಲಿ ಬಿಜೆಪಿಯಿಂದ ಏಕಾಏಕಿ ‘ಶಸ್ತ್ರತ್ಯಾಗ’
ಶಿವಮೊಗ್ಗ, ಜೂ. 13: ಕಳೆದ ಜಿಲ್ಲಾ ಪಂಚಾಯತ್ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದು ಅಬ್ಬರಿಸಿ ಬೊಬ್ಬಿರಿದು, ಮತ್ತೊಂದು ಸಭೆ ಆಯೋಜನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಪಕ್ಷ ದಿಢೀರ್ ಆಗಿ ಶಸ್ತ್ರತ್ಯಾಗ ಮಾಡಿದೆ. ಇದರಿಂದ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆಲುವು ಸಾಧಿಸಿದೆ. ಸೋಮವಾರ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿದ ವಿಶೇಷ ಸಭೆೆಯಲ್ಲಿ ಈ ಹಿಂದಿನ ಸಭೆೆಯಲ್ಲಿ ಅಂಗೀಕರಿಸಲಾಗಿದ್ದ ನಿರ್ಣಯಗಳನ್ನೇ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸುವ ನಿರ್ಧಾರ ಮಾಡಲಾಯಿತು. ಇದಕ್ಕೆ ಬಿಜೆಪಿ ಪಕ್ಷ ಕೂಡ ಬೆಂಬಲಿಸಿತು. ಇದರಿಂದ ಜಿಪಂ ಅಧ್ಯಕ್ಷರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆ ಅಧಿಕಾರ ಲಭ್ಯವಾಗಿದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಇತ್ತೀಚೆಗೆ ನಡೆದ ವಿಶೇಷ ಸಭೆೆಯಲ್ಲಿ ಬಿಜೆಪಿ ಪಕ್ಷವು ಸಮಿತಿಯೊಂದರ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿತ್ತು. ಇಲ್ಲದಿದ್ದರೆ ಚುನಾವಣೆಯ ಮೂಲಕ ಅಧ್ಯಕ್ಷರ ಆಯ್ಕೆ ನಡೆಸಬೇಕು ಎಂದು ಒತ್ತಾಯಿಸಿತ್ತು. ಆದರೆ, ಇದಕ್ಕೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿಂದಿನಿಂದಲೂ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಜಿಪಂ ಅಧ್ಯಕ್ಷರಿಗೆ ನೀಡಲಾಗುತ್ತಿದೆ. ಈ ಹಿಂದಿನಂತೆ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯ ಅಂಗೀಕರಿಸೊಣ. ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿಯೂ ಇದೇ ಸಂಪ್ರದಾಯ ಅನುಸರಿಸಿಕೊಂಡು ಬರಲಾಗಿತ್ತು. ಇದೀಗ ಚುನಾವಣೆ ನಡೆಸಿ ಎಂದು ಕೇಳುತ್ತಿರುವುದೇಕೆ? ಎಂದು ಮೈತ್ರಿಕೂಟದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಜೊತೆಗೆ ಯಾವುದೇ ಕಾರಣಕ್ಕೂ ಬಿಜೆಪಿಗರಿಗೆ ಅಧ್ಯಕ್ಷ ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಭೆೆಯನ್ನು ಕೆಲ ನಿಮಿಷ ಮುಂದೂಡಿ ಸಂಧಾನ ಮಾತುಕತೆ ನಡೆಸಲಾಗಿತ್ತು. ಆದರೆ ಮಾತುಕತೆ ವಿಫಲವಾಗಿತ್ತು. ಬಳಿಕ ಸಭೆ ಸೇರಿದಾಗ ಬಿಜೆಪಿ ಸದಸ್ಯರ ಅನುಪಸ್ಥಿತಿಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಣಯ ಅಂಗೀಕರಿಸಲಾಯಿತು. ಈ ನಿರ್ಧಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿ ತಮಗೆ ಮಾಹಿತಿ ನೀಡದೆ ಸಭೆ ನಡೆಸಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಆರೋಪಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಾಕೇಶ್‌ಕುಮಾರ್‌ರವರಿಗೆ ಮನವಿ ಪತ್ರ ಅರ್ಪಿಸಿತು. ಹಾಗೆಯೇ ಸದಸ್ಯರೆಲ್ಲರೂ ಮತ್ತೊಮ್ಮೆ ಸಿಇಒಗೆ ಮನವಿ ಅರ್ಪಿಸಿ, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಹೊಸದಾಗಿ ವಿಶೇಷ ಸಭೆ ಆಹ್ವಾನಿಸಬೇಕು ಎಂದು ಆಗ್ರಹಿಸಿದರು.
ಶಸ್ತ್ರತ್ಯಾಗ:
ಬಿಜೆಪಿ ಸದಸ್ಯರ ಮನವಿಯ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷೆ ವಿಶೇಷ ಸಭೆ ಕರೆದಿದ್ದರು. ತಮ್ಮ ಬೇಡಿಕೆ ಈಡೇರುವವರೆಗೂ ನಿರ್ಧಾರ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದ್ದರು. ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಕೂಡ ಬಿಜೆಪಿ ಒತ್ತಡಕ್ಕೆ ಮಣಿಯದಿರಲು ತೀರ್ಮಾನ ಕೈಗೊಂಡಿತ್ತು. ಇದರಿಂದ ಸೋಮವಾರದ ವಿಶೇಷ ಸಭೆೆ ಸಾಕಷ್ಟು ಕುತೂಹಲ ಕೆರಳಿಸಿ ಹೈಡ್ರಾಮಾ ಸೃಷ್ಟಿಸುವ ನಿರೀಕ್ಷೆಯಿತ್ತು. ಆದರೆ ಬಿಜೆಪಿ ಪಕ್ಷ ಏಕಾಏಕಿ ಶಸ್ತ್ರತ್ಯಾಗ ಮಾಡಿತು. ಆ ಪಕ್ಷದ ಕೆಲ ಸದಸ್ಯರು ಈ ಹಿಂದಿನ ಸಭೆಯಲ್ಲಾದ ಘಟನಾವಳಿಗಳ ಬಗ್ಗೆ ಮಾತನಾಡಿದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಯಾವುದೇ ಬೇಡಿಕೆ ಮುಂದಿಡಲಿಲ್ಲ. ಚುನಾವಣೆ ನಡೆಸುವಂತೆಯೂ ಆಗ್ರಹಿಸಲಿಲ್ಲ. ಅಂತಿಮವಾಗಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಮಾತನಾಡಿ, ಈ ಹಿಂದಿನ ಸಭೆೆಯಲ್ಲಿಯೇ ನಿರ್ಣಯ ಅಂಗೀಕರಿಸಲಾಗಿದೆ. ಅದನ್ನೇ ಪರಿಪಾಲನೆ ಮಾಡಲಾಗುವುದು ಎಂದರು. ಬಿಜೆಪಿ ವಿಧಾನಪರಿಷತ್ ಸದಸ್ಯ ಎಂ.ಬಿ. ಬಾನುಪ್ರಕಾಶ್ ಮಾತನಾಡಿ, ಈ ಹಿಂದಿನ ಸಭೆೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿಲ್ಲ. ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿರುವ ನಿರ್ಣಯ ಅಂಗೀಕರಿಸಿ ಎಂದು ಸಲಹೆ ನೀಡಿದರು. ಅದರಂತೆ ಅಧ್ಯಕ್ಷೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.