ಕಸ ವಿಲೇವಾರಿಗೆ ಜಾಗ ನೀಡಲು ಒತ್ತಾಯ
ಮಡಿಕೇರಿ ಜೂ.13: ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಸ ವಿಲೇವಾರಿಗೆ ಸೂಕ್ತ ಸ್ಥಳ ನೀಡುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷ ಎಂ.ಕೆ. ಮಣಿ ಅವರ ನೇತೃತ್ವದಲ್ಲಿ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಅಧ್ಯಕ್ಷರು ಹಾಗೂ ಸದಸ್ಯರು, ಸಿದ್ದಾಪುರ ಗ್ರಾಪಂ ಕಸವಿಲೇವಾರಿ ಸಮಸ್ಯೆಯನ್ನು ಕಳೆದ ಅನೇಕ ವರ್ಷಗಳಿಂದ ಎದುರಿಸುತ್ತಾ ಬಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸಿದ್ದಾಪುರ ಗ್ರಾಮ ಪಟ್ಟಣ ಪ್ರದೇಶವಾಗಿ ಬೆಳವಣಿಗೆ ಕಾಣುತ್ತಿದ್ದು, ಸುಮಾರು 12 ಸಾವಿರ ಜನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 2 ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತಿದೆ. ಕಸ ವಿಲೇವಾರಿಗೆ ಸೂಕ್ತ ಸ್ಥಳವಿಲ್ಲದೆ ಅಶುಚಿತ್ವದ ವಾತಾವರಣ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೀಗ ಮಳೆಗಾಲವೂ ಆರಂಭ ಗೊಂಡಿರುವುದರಿಂದ ಕಸ ವಿಲೇವಾರಿ ಸಮಸ್ಯೆ ಮತ್ತಷ್ಟು ಕ್ಲಿಷ್ಟಕರವಾಗಿದೆ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಹಲವಾರು ಹೋರಾಟಗಳನ್ನು ಮಾಡಿದ್ದರೂ ಈವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಪಂಚಾಯತ್ ಅಧ್ಯಕ್ಷ ಎಂ.ಕೆ.ಮಣಿ ಅಸಹಾಯಕತೆ ವ್ಯಕ್ತಪಡಿಸಿದರು.
ಪಂಚಾಯತ್ ವ್ಯಾಪ್ತಿಯ ಸರ್ವೇ ಸಂಖ್ಯೆ 124 ರ ಸರಕಾರಿ ನಿವೇಶನ ಜನ ವಸತಿ ಪ್ರದೇಶದಿಂದ ದೂರದಲ್ಲಿದ್ದು, ಕಸ ವಿಲೇವಾರಿಗೆ ಸೂಕ್ತ ಜಾಗವೆಂದು ಗುರುತಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಹಿಂದಿನ ಜಿಲ್ಲಾಧಿಕಾರಿಯವರಿಗೆ, ಶಾಸಕರಿಗೆ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು. ದಿನ ಕಳೆದಂತೆ ಕಸದ ಸಮಸ್ಯೆ ಉಲ್ಬಣಿಸುತ್ತಿದ್ದು, ತಕ್ಷಣ ಜಿಲ್ಲಾಡಳಿತ ಸಮಸ್ಯೆಗೆ ಸ್ಪಂದಿಸಿ ಗ್ರಾಪಂ ಈಗಾಗಲೇ ಗುರುತಿಸಿರುವ ಜಾಗದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವ ಮೂಲಕ ಅಧಿಕೃತ ಆದೇಶ ಹೊರಡಿಸಬೇಕೆಂದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭ ಉಪಾಧ್ಯಕ್ಷ ಎಂ.ಎ.ರಾಜೇಶ್ವರಿ, ಸದಸ್ಯರಾದ ಅಬ್ದುಲ್ ಶುಕೂರ್, ಮಂಜುನಾಥ್, ಹುಸೈನ್, ರೆಜಿತ್ ಕುಮಾರ್, ಕೃಷ್ಣ, ಪ್ರೇಮಾ, ಪೂವಮ್ಮ, ಲಕ್ಷ್ಮೀ, ಪ್ರತಿಮಾ, ಶೈಲಾ, ಶೀಲಾ, ಕೆ.ಜಿ. ಕರುಪಯ್ಯ, ದೇವಜಾನು ಮೊದಲಾದವರಿದ್ದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಿದ್ದಾಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.