ಕೊಡಗಿನಲ್ಲಿ ಮುಂಗಾರು ಮಳೆಯ ವೈಭವ: ಜನರಲ್ಲಿ ಸಂತಸ
ಮಡಿಕೇರಿ ಜೂ.13 : ಮುಂಗಾರು ಮಳೆ ಪ್ರಸಕ್ತ ವರ್ಷ ನಿರೀಕ್ಷೆಯಂತೆ ನಿಗದಿತ ಅವಧಿಯಲ್ಲಿ ಆರಂಭವಾಗಿದೆ. ಕೇರಳಕ್ಕೆ ಮುಂಗಾರು ಮಳೆ ಆರಂಭವಾಗಿರುವುದರಿಂದ ಕೊಡಗಿನಲ್ಲಿಯೂ ಮುಂಗಾರು ಮಳೆಯ ವಾತಾವರಣ ನಿರ್ಮಾಣವಾಗಿರುವುದು ಕಾವೇರಿ ಕಣಿವೆಯ ಜನತೆಯಲ್ಲಿ ಸಂತಸ ತಂದಿದೆ.
ಕಳೆದ ವರ್ಷ ಜನವರಿಯಿಂದ ಮೇ ತಿಂಗಳ ಅಂತ್ಯದ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಗಾಗ ಮಳೆಯಾಗಿ ಬರ ಪರಿಸ್ಥಿತಿ ಉಂಟಾಗಿರಲಿಲ್ಲ. ಆದರೆ ಈಬಾರಿ ಎಪ್ರಿಲ್, ಮೇ ತಿಂಗಳಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಹೆಚ್ಚಿನ ಮಳೆಯಾಗಿ ಜಲಾಶಯಗಳು ಭರ್ತಿಯಾಗುವುದರ ಜೊತೆಗೆ ಕೃಷಿ ಚಟುವಟಿಕೆಗಳು ಗರಿಗೆದರಲಿ ಎಂಬುದು ಎಲ್ಲರ ಆಶಯವಾಗಿದೆ. ಕಳೆದ 30 ವರ್ಷಗಳಲ್ಲಿ ಅತ್ಯಧಿಕ ಮಳೆಯಾಗಿ ದಾಖಲೆ ಸೇರಿದ್ದು, 2013ರ ಮುಂಗಾರು ಮಳೆ, 2013ರ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಸಿಂಕೋನ ಹಾಗೂ ಕೊಯನಾಡು ಬಳಿ ರಸ್ತೆ ಕುಸಿತಗೊಂಡಿತ್ತು. ಹಾಗೆಯೇ ಚೆಟ್ಟಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದ್ದನ್ನು ಸ್ಮರಿಸಬಹುದಾಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2014ರ ಜನವರಿಯಿಂದ ಮೇ ಅಂತ್ಯವರೆಗೆ 242.20 ಮಿ.ಮೀ. ಮಳೆಯಾಗಿದ್ದರೆ, 2015ರ ಇದೇ ಅವಧಿಯಲ್ಲಿ 320.79 ಮಿ.ಮೀ. ಮಳೆಯಾಗಿತ್ತು, 2016ರ ಇದೇ ಅವಧಿಯಲ್ಲಿ (ಜನವರಿಯಿಂದ ಮೇ ಅಂತ್ಯದ ವರೆಗೆ) ಕೇವಲ 158.20 ಮಿ.ಮೀ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಮಳೆ ಕಡಿಮೆಯಾಗಿರುವುದು ತಿಳಿಯುತ್ತದೆ.
ಹಾಗೆಯೇ ವಾಡಿಕೆಯನ್ನು ಗಮನಿಸಿದಾಗ ಈ ಬಾರಿ ಸುಮಾರು ಶೇ.35ರಷ್ಟು ಮಳೆಯಾಗಿರುವುದು ಅಂಕಿ ಅಂಶಗಳಿಂದ ಕಂಡುಬರುತ್ತದೆ. ತಾಲೂಕುವಾರು ಗಮನಿಸಿದಾಗ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60 ಮಿ.ಮೀ.ಗಳಾಗಿ
ದ್ದು, 2014ರಲ್ಲಿ 367.39 ಮಿ.ಮೀ., 2015ರಲ್ಲಿ 414.65 ಮಿ.ಮೀ.ಮಳೆಯಾಗಿದ್ದರೆ, 2016ರಲ್ಲಿ 234.75 ಮಿ.ಮೀ.ನಷ್ಟು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 2016 ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 122.33 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 2016 ಜನವರಿಯಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 117.55 ಮಿ.ಮೀ.ಮಳೆಯಾಗಿದೆ.
ಒಟ್ಟ್ಟಾರೆ ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಮಳೆ ಕೊರತೆ ಕಂಡು ಬಂದರೂ, ಕಳೆದ ಒಂದು ವಾರದಿಂದ ಮುಂಗಾರು ಮಳೆ ವಾತಾವರಣ ನಿರ್ಮಾಣವಾಗಿರುವುದು, ಕೃಷಿಕರೂ ಸೇರಿದಂತೆ ಎಲ್ಲರಲ್ಲಿ ಹರ್ಷಮನೆಮಾಡಿದೆ, ಹವಾಮಾನ ವಿಜ್ಞಾನಿಗಳ ಪ್ರಕಾರ ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹೇಳಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದು ಕಾವೇರಿ ಕಣಿವೆಯ ಜನರಲ್ಲಿ ಸಂತಸ ತರುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ. ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ: ಮಳೆಗಾಳಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಬರೆ ಜರಿಯುವುದು, ಮನೆಗಳ ಕುಸಿತ, ಆಸ್ತಿ ಪಾಸ್ತಿ ಹಾನಿ ಉಂಟಾಗಬಹುದಾಗಿದ್ದು, ಹವಾಮಾನ ಇಲಾಖೆ ವರದಿಯಂತೆ ಇನ್ನೂ ಹೆಚ್ಚಿಗೆ ಮಳೆ ಆಗುವ ಸಂಭವವಿದೆ ಎಂದು ನಗರಸಭಾ ಪೌರಾಯುಕ್ತೆ ಪುಷ್ಪಾವತಿ ತಿಳಿಸಿದ್ದಾರೆ. ಈ ಹಿನ್ನೆಲೆ ಬೆಟ್ಟಗುಡ್ಡಗಳಲ್ಲಿ, ಎತ್ತರದ ಪ್ರದೇಶಗಳಲ್ಲಿ ಹಾಗೂ ಬರೆಗಳ ಕೆಳಭಾಗಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರು ಸುರಕ್ಷಿತೆಯ ದೃಷ್ಟಿಯಿಂದ ಕೂಡಲೇ ಸ್ಥಳಾಂತರಗೊಂಡು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.