×
Ad

ಶಿಕಾರಿಪುರ: ಗ್ರಾಮ ವಿಕಾಸ ಯೋಜನೆಗೆ ಮುಡುಬಸಿದ್ದಾಪುರ ಗ್ರಾಮ ಆಯ್ಕೆ

Update: 2016-06-13 23:33 IST

ಶಿಕಾರಿಪುರ, ಜೂ.13; ಗ್ರಾಮ ವಿಕಾಸ ಯೋಜನೆ ಯಡಿ ತಾಲೂಕಿನ ಮುಡುಬಸಿದ್ದಾಪುರ ಗ್ರಾಮವನ್ನು ಆಯ್ಕೆ ಮಾಡಿ ಸರಕಾರಕ್ಕೆ ಶಿಫಾರಸು ಕಳುಹಿಸಿದ್ದು, ಶೀಘ್ರದಲ್ಲಿಯೇ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯಡಿ ರಸ್ತೆ, ಚರಂಡಿ ಮತ್ತಿತರ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ ಗ್ರಾಮವನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಸೋಮವಾರ ತಾಲೂಕಿನ ಮುಡುಬಸಿದ್ದಾಪುರ ಗ್ರಾಮದಲ್ಲಿನ ನೂತನ ಪಶು ಚಿಕಿತ್ಸಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮ ಹಾಗೂ ಸುತ್ತಮುತ್ತಲಿನ ರೈತ ವರ್ಗದ ಬಹುದಿನದ ಪಶು ಆಸ್ಪತ್ರೆಯ ಬೇಡಿಕೆ ಈಡೇರಿದ್ದು, ತಾಲೂಕಿನ 6ವಿವಿಧ ಗ್ರಾಮಗಳಲ್ಲಿ ಚಿಕಿತ್ಸಾ ಕೇಂದ್ರ ಆರಂಭಕ್ಕೆ ಖುದ್ದು ಪಶುಸಂಗೋಪನಾ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗಿ ತಿಳಿಸಿದರು.

ಶರಾವತಿ ಮುಳುಗಡೆ ಸಂತ್ರಸ್ಥರು ಹೆಚ್ಚಾಗಿರುವ ಗ್ರಾಮದ ಸುತ್ತಮುತ್ತ ಸಾಗುವಳಿ ಜಮೀನು ನಂಬಿ ಬದುಕನ್ನು ಕಟ್ಟಿಕೊಂಡಿರುವ ಬಗರ್‌ಹುಕುಂ ಸಾಗುವಳಿದಾರರ ಬಗ್ಗೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದಂತೆ ಸಂತ್ರಸ್ಥರ ಪರವಾಗಿ ಹೋರಾಡುವುದಾಗಿ ಭರವಸೆ ನೀಡಿದ ಅವರು ಮುಳುಗಡೆ ಸಂತ್ರಸ್ಥರಿಗೆ ಹಕ್ಕುಪತ್ರ ನೀಡಲು ಅವಕಾಶವಿದ್ದು, ಅದಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.

ಆಡಳಿತ ಹಾಗೂ ವಿರೋಧ ಪಕ್ಷಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಭದ್ರಾ ಕಾಡಾ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿ,ರಾಜ್ಯ ಸರಕಾರ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೊಳಿಸಿದ್ದು, ಪಶುಭಾಗ್ಯ ಯೋಜನೆಯಡಿ 1.25ಲಕ್ಷ ಕುರಿ ಸಾಕಣೆಗೆ 67ಸಾವಿರ ರೂ. ನೀಡಲಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಭಾಸ್ಕರನಾಯ್ಕ ಮಾತನಾಡಿ, ನಾಗರಿಕತೆಯ ಸಮಾಜದಲ್ಲಿ ಕೃಷಿ ಹಾಗೂ ಪಶುಪಾಲನೆ ಅವಿಭಾಜ್ಯ ಅಂಗವಾಗಿದೆ ಎಂದರು.

ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ರೂಪಾ, ಸದಸ್ಯ ಮಲ್ಲಿಕಾರ್ಜುನ ರೆಡ್ಡಿ, ಹೋತನಕಟ್ಟೆ ಗ್ರಾಪಂ ಅಧ್ಯಕ್ಷ ಮಧು, ಉಪಾಧ್ಯಕ್ಷೆ ಸರಸ್ವತಿ, ಸದಸ್ಯ ಶಾಂತಪ್ಪ, ಚಿನ್ನಪ್ಪ, ಬಸವರಾಜ, ಮಮತಾ, ರತ್ನಮ್ಮ ನಾಗಪ್ಪ, ಯೋಗೇಶಪ್ಪ, ಶಶಿಕಲಾ, ರತ್ನಮ್ಮ, ಇಒ ಲೋಹಿತ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಯಣ್ಣ, ಡಾ.ಬಸವೇಶ ಹೂಗಾರ್, ಡಾ.ಕುಮಾರನಾಯ್ಕ, ಕೆನರಾ ಬ್ಯಾಂಕ್ ಪ್ರಬಂಧಕ ಬಂಜಾರ ರಾಮುಧರ್ಮ, ಜೆ.ಜೆ ಪ್ರಕಾಶ, ಸುಕೇಂದ್ರಪ್ಪ, ಬಂಗಾರಪ್ಪ, ಪಚ್ಚಿ ಗಿಡ್ಡಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News