ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ತೊಲಗಲಿ: ನ್ಯಾ. ಪ್ರಭಾವತಿ
ಚಿಕ್ಕಮಗಳೂರು, ಜೂ.13: ರಾಜ್ಯದ ಕೆಲವು ಭಾಗಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಬಾಲ ಕಾರ್ಮಿಕರು ಇಲ್ಲ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ವಿಷಾದಿಸಿದರು.
ಅಂಬಳೆ ಕೈಗಾರಿಕಾ ಪ್ರದೇಶದ ಓಲಂ ಆಗ್ರೋ ಇಂಡಸ್ಟ್ರೀಸ್ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಿತ್ತು ತಿನ್ನುವ ಬಡತನ, ಜೀವನದ ಬಂಡಿ ಎಳೆಯುವವರು ಯಾರೂ ಇಲ್ಲದ ಮನೆಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಅನಿಷ್ಟ ಪದ್ಧತಿಗೆ ದೂಡುತ್ತಿದ್ದಾರೆ. ಸಾಮಾಜಿಕ ಪಿಡುಗು ಹೋಗಲಾಡಿಸುವ ಉದ್ದೇಶದಿಂದ ವಿಶ್ವ ಬಾಲ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದರೂ ಪೂರ್ಣ ತೊಲಗಿಸಲು ಸಾಧ್ಯವಾಗಿಲ್ಲ ಎಂದರು. ಬಾಲ ಕಾರ್ಮಿಕ ಕಾನೂನುಗಳ ಅರಿವು ಜನ ಸಾಮಾನ್ಯರಿಗೆ ಇಲ್ಲ. ಹೊಟೇಲ್, ಗುಡಿ ಕೈಗಾರಿಕೆ ಮುಂತಾದ ಸ್ಥಳಗಳಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದರೂ, ಬಂಧನದಿಂದ ಬಿಡಿಸುವ ಕೆಲಸ ನಮ್ಮಿಂದ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುವಂತೆ ಮಕ್ಕಳು ತಮ್ಮ ಹಕ್ಕುಗಳಿಗೂ ಹೋರಾಟ ಮಾಡುವ ಸನ್ನಿವೇಶ ಉಂಟಾಗಬಹುದು. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕು ಗಳನ್ನು ಗೌರವಿಸಬೇಕು. ಪೋಷಕರು ಬಡತನವೆಂಬ ನೆಪ ಹೇಳದೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಸುಶಿಕ್ಷಿತರನ್ನಾಗಿ ಮಾಡಿದಲ್ಲಿ ಅವರ ಭವಿಷ್ಯ ಉಜ್ವಲವಾಗುವುದು ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ತಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಬದ್ಧತೆಯುಳ್ಳ ಸಂಘ-ಸಂಸ್ಥೆಗಳು ಬಾಲ ಕಾರ್ಮಿಕ ಅನಿಷ್ಟ ಪದ್ಧತಿ ಹೋಗಲಾಡಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬಾಲ ಕಾರ್ಮಿಕ ನಿಷೇಧ- ನಿಯಂತ್ರಣ ಕಾಯ್ದೆ-1986ರ ಕುರಿತು ವಕೀಲ ದೇವೇಂದ್ರಕುಮಾರ್ ಜೈನ್ ಮಾತನಾಡಿದರು. ನ್ಯಾಯಾಧೀಶ ದಯಾನಂದ್ ಎಂ.ಹಿರೇಮಠ್, ಉದ್ಯಮಿಗಳಾದ ನಾಗರಾಜ್, ದರ್ವಿತ್‌ಗರ್ಗ್, ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.