ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಡಿಸಿ ಸೂಚನೆ
ಚಿಕ್ಕಮಗಳೂರು, ಜೂ.13: ಜಿಲ್ಲೆಯ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಅವರ ಅಗತ್ಯಕ್ಕೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಮುಂದಾಗ ಬೇಕೆಂದು ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ ತಿಳಿಸಿದರು.
ಅವರು ಸೋಮವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಬರದಿಂದ ಸಾಗಿವೆ. ರೈತರಿಗೆ ಅಗತ್ಯವಿರುವ ಉತ್ತಮ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಯಾವುದೇ ತೊಂದರೆ ಇಲ್ಲದಂತೆ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸಗೊಬ್ಬರ ಮಾರಾಟಗಾರರು, ರೈತರಿಗೆ ರಸಗೊಬ್ಬರ ಖರೀದಿ ಮಾಡುವಾಗ ರಶೀದಿಗಳನ್ನು ಕಡ್ಡಾಯ ವಾಗಿ ನೀಡಬೇಕು. ಅಲ್ಲದೇ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣವನ್ನು ಪಡೆಯಬಾರದು. ತಪ್ಪಿದಲ್ಲಿ ಅಂತಹ ಮಾರಾಟಗಾರರ ರಸಗೊಬ್ಬರದ ಮಾರಾಟ ಪರವಾನಿಗೆ ಯನ್ನು ತತ್‌ಕ್ಷಣದಲ್ಲಿಯೇ ರದ್ದುಪಡಿಸಬೇಕು. ಜಿಲ್ಲೆಯ ಪ್ರತಿಯೊಬ್ಬ ರೈತರ ಬೆಳೆಗಳಿಗೆ ವಿಮೆಯನ್ನು ಪ್ರತಿಶತ ನೂರರಷ್ಟು ಮಾಡುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಇದರ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು ಜೊತೆಗೆ ಲೀಡ್ ಬ್ಯಾಂಕ್‌ನ ಸಹಯೋಗ ಪಡೆಯಬೇಕೆಂದು ಸೂಚಿಸಿದರು. ಜಿಲ್ಲಾ ವ್ಯಾಪ್ತಿಯ ಎಲ್ಲ ಲೇವದೇವಿಗಾರರು, ಗಿರವಿದಾರರು ಹಾಗೂ ಹಣಕಾಸು ಸಂಸ್ಥೆಗಳು ರೈತರಿಗೆ ಹಣಕಾಸಿನ ಸಾಲ ವ್ಯವಹಾರಗಳನ್ನು ಮಾಡುವಾಗ ಸರಕಾರ ನಿಗದಿಪಡಿಸಿರುವ ದರದಲ್ಲಿಯೇ ಬಡ್ಡಿ ವಿಧಿಸುವಂತೆ ಎಚ್ಚರ ವಹಿಸಬೇಕೆಂದು ಸಹಕಾರ ಸಂಘಗಳ ಉಪನಿಬಂಧಕರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಸಹಕಾರ ಸಂಘಗಳ ಉಪ ನಿಬಂಧಕ ಕಾಂತರಾಜ್, ಪಶುಸಂಗೋಪನಾ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ವಾರ್ತಾ ಅಧಿಕಾರಿ ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.