‘ಮೋದಿ ಸರಕಾರದಿಂದ ಬಡವರಿಗೆ ಅನನುಕೂಲ’
ಭಟ್ಕಳ, ಜೂ.13: ಭಾರತೀಯ ಕಾರ್ಮಿಕರ ಸಂಘಟನಾ ಕೇಂದ್ರದ(ಸಿಐಟಿಯು)ಭಟ್ಕಳ ತಾಲೂಕು ಘಟಕದ ವತಿಯಿಂದ ತಾಲೂಕಿನ 3ನೆ ಸಮ್ಮೇಳನವು ತಾಲೂಕಿನ ಶಿರಾಲಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮ್ಮೇಳನದಲ್ಲಿ ಮಾತನಾಡಿದ ಭಾರತೀಯ ಕಾರ್ಮಿಕರ ಸಂಘಟನಾ ಕೇಂದ್ರದ ರಾಜ್ಯ ಉಪಾಧ್ಯಕ್ಷ ತಿಲಕಗೌಡ, ಮೋದಿ ಹಾಗೂ ಸಿದ್ದರಾಮಯ್ಯನವರ ಸರಕಾರಗಳು ಬಡವರಿಗೆ ಅನುಕೂಲವಾಗುವ ಯಾವುದೇ ಯೋಜನೆಯನ್ನು ತಂದಿಲ್ಲ. ಬಡವರಿಗೆ ಬೆಲೆ ಏರಿಕೆ ನಿಯಂತ್ರಣ ತರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ಮೋದಿಯವರು ಬೇರೆ ಬೇರೆ ದೇಶಗಳಿಗೆ ಸುತ್ತಾಡಿ ನಮ್ಮ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುತ್ತೇನೆಂಬ ಬಿಂಬಿತವನ್ನು ತೋರಲು ಹೊರಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಕಿತ್ತಾಟದಲ್ಲಿ ಬಡವರು ಹಾಗೂ ರಾಜ್ಯದ ಜನತೆ ಸಮಸ್ಯೆಯಲ್ಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಹಿರಿಯಕಾರ್ಮಿಕ ಮುಖಂಡರಾದ ವೆಂಕಟರಮಣ ಬಾಗಲ್ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಇದೇ ಸೆಪ್ಟೆಂಬರ್ 2ರಂದು ಅಖಿಲ ಭಾರತ ಕಾರ್ಮಿಕರ ಮುಷ್ಕರ ಯಶಸ್ವಿ ಮಾಡುವ ಕುರಿತು, ಒಟ್ಟು 14ಕೇಂದ್ರ ಕಾರ್ಮಿಕರ ಸಂಘಟನೆಯಿಂದ ಮುಷ್ಕರ ನಡೆಯಲಿದ್ದು, ಕಾರ್ಮಿಕರು ಅವರ ಬೇಡಿಕೆಗಳನ್ನು ವ್ಯಕ್ತಪಡಿಸುವದರೊಂದಿಗೆ ಮುಷ್ಕರದಲ್ಲಿ ಭಾಗವಹಿಸಲು ತಿಳಿಸಲಾಯಿತು.
ಭಾರತೀಯ ಕಾರ್ಮಿಕರ ಸಂಘಟನಾ ಕೇಂದ್ರದ ಜಿಲ್ಲಾ ಕಾರ್ಯದರ್ಶಿ ತಿಮ್ಮಪ್ಪಗೌಡ ಮಾತನಾಡಿದರು.
ಭಾರತೀಯ ಕಾರ್ಮಿಕರ ಸಂಘಟನಾ ಕೇಂದ್ರದ ತಾಲೂಕು ಘಟಕದ ಅಧ್ಯಕ್ಷ ಮಾಸ್ತಿ ನಾಯ್ಕ, ಭಾರತೀಯ ಕಾರ್ಮಿಕರ ಸಂಘಟನಾ ಕೇಂದ್ರದ ಮುಖಂಡರಾದ ಸುಭಾಶ್‌ಕೊಪ್ಪಿಕರ್, ಗೀತಾ ನಾಯ್ಕ, ಪುಷ್ಪಾವತಿ ನಾಯ್ಕ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ನೌಕರರು, ಕಟ್ಟಡ ಕಾರ್ಮಿಕರು, ನಿವೃತ್ತ ಅಂಚೆ ನೌಕರರು ಮತ್ತಿತರರು ಉಪಸ್ಥಿತರಿದ್ದರು.