ಬಯೋಮೆಟ್ರಿಕ್ ಹಾಜರಾತಿಯಿಂದ ಶಿಕ್ಷಣ ಇಲಾಖೆಯಲ್ಲಿ ಶಿಸ್ತು: ಸಚಿವ ಕಿಮ್ಮನೆ ರತ್ನಾಕರ
ಶಿವಮೊಗ್ಗ, ಜೂ.13: ಆಧಾರ್‌ಯುಕ್ತ ಬಯೋಮೆಟ್ರಿಕ್ ಹಾಜರಾತಿ ಯಿಂದ ಶಿಕ್ಷಣ ಇಲಾಖೆಯಲ್ಲಿ ಶಿಸ್ತು ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್‌ನಿಂದ ರಾಜ್ಯದಲ್ಲೇ ಪ್ರಥಮಬಾರಿಗೆ ಜಿಲ್ಲೆಯ ಹೈಸ್ಕೂಲ್‌ಗಳಿಗೆ ನೀಡಲಾದ ಆಧಾರ್ ಸಂಖ್ಯೆ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ಯಂತ್ರಗಳ ಬಿಡುಗಡೆ ಮತ್ತು ಜಿಲ್ಲೆಯ ಮುಖ್ಯೋಪಾಧ್ಯಾಯರಿಗೆ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಕರೇ ಶಿಸ್ತು ಪಾಲಿಸದಿದ್ದರೆ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಿಪಂ ಇದೇ ಮೊದಲ ಬಾರಿಗೆ ತಮ್ಮ ಅನುದಾನದಲ್ಲಿ ಶಿಕ್ಷಣ ಇಲಾಖೆಯಲ್ಲಿ ಶಿಸ್ತು ತರಲು ಆಧಾರ್ ಆಧಾರಿತ ಬಯೋಮೆಟ್ರಿಕ್ ಯಂತ್ರಗಳನ್ನು ವಿತರಿಸಿ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು. ವ್ಯವಸ್ಥೆ ಸರಿಯಾಗದೆ ಉತ್ತಮ ಫಲಿತಾಂಶ ನಿರೀಕ್ಷೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇದೊಂು ಉತ್ತಮ ಹೆಜ್ಜೆಯಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆ ಎಸೆಸೆಲ್ಸಿಯಲ್ಲಿ 10ನೆ ಸ್ಥಾನದೊಳಗಿರಬೇಕು. ಮುಖ್ಯೋಪಾಧ್ಯಾಯರು ಈ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕು ಎಂದರು.
ಪ್ರಸ್ತುತ ಜಿಪಂ ನಿಂದ ಸರಕಾರಿ ಪ್ರೌಢಶಾಲೆಗಳಿಗೆ ಮಾತ್ರ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ತೀರ್ಥಹಳ್ಳಿ ಮತ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ 6ರಿಂದ 8ರವರೆಗೆ ಹಿರಿಯ ಪ್ರಾಥಮಿಕ ಶಾಲೆಗಳಿಗೂ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಶಿಸ್ತನ್ನು ಪಾಲಿಸಬೇಕು. ಈ ಮೂಲಕ ಮುಂದಿನ ಪ್ರಜೆಗಳ ಭವಿಷ್ಯವನ್ನು ಬೆಳಗಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲ ಶಿಕ್ಷಕರ ಆಧಾರ್ ಸಂಖ್ಯೆಯನ್ನು ಈ ಬಯೋಮೆಟ್ರಿಕ್‌ಗೆ ಅಳವಡಿಸಲಾಗಿದ್ದು, ಆಧಾರ್ ಸಂಖ್ಯೆ ಕೊನೆಯ 8 ಸಂಖ್ಯೆಯನ್ನು ನಮೂದಿಸಿ ಐಡಿ ಮಾಡಿಕೊಳ್ಳಬೇಕು. ನಂತರ ತಮ್ಮ ಯಾವುದೇ ಬೆರಳನ್ನು ಒತ್ತು ಮೂಲಕ 20 ಸೆಕೆಂಡ್‌ಗಳಲ್ಲಿ ತಮ್ಮ ಹಾಜರಾತಿಯನ್ನು ದಾಖಲಿಸಬೇಕು. ಇದು ದೆಹಲಿಯ ಆಧಾರ್ ಕೇಂದ್ರದಲ್ಲಿ ನಮೂದಾಗಿ ಅಲ್ಲಿಂದ ಪ್ರತಿ ತಿಂಗಳೂ ಹಾಜರಾತಿ ಪಡೆಯಬೇಕಿದೆ ಎಂದು ವಿವರಿಸಿದರು.
ಈ ಯಂತ್ರ ಸಿಮ್ ಆಧಾರಿತವಾಗಿದ್ದು, ಇದೊಂದು ಬಹೋಯೋಗಿ ಯಂತ್ರವಾಗಿದೆ. ಇದರಿಂದ ಶಾಲಾ ಶಿಕ್ಷಕರು ಬ್ರೌಸಿಂಗ್ ಕೂಡ ಮಾಡಬಹುದು. ಮಕ್ಕಳಿಗೆ ಅನುಕೂಲವಾಗುವ ಮಾಹಿತಿಯನ್ನು ಸಾಮಾಜಿಕ ಜಾಲದ ಮೂಲಕ ಪಡೆದು ನೀಡಬಹುದಾಗಿದೆ. ಫೋಟೊ ತೆಗೆಯಬಹುದಾಗಿದೆ. ಹೀಗೆ ಬಹೋಪಯೋಗಿ ಯಂತ್ರ ಇದಾಗಿದ್ದು, ಇದನ್ನು ಸದ್ಬಳಕೆ ಮಾಡುವ ಜವಾಬ್ದಾರಿ ಮುಖ್ಯೋಪಾ ಧ್ಯಾಯರದ್ದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಯೋಜನೆ ಶೀರ್ಷಿಕೆಯಡಿ ಒದಗಿಸಲಾಗು ವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷ ವೇದಾವಿಜ ಯಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಡಿಡಿಪಿಐ ನಾಗರಾಜ್‌ಗೌಡ ಉಪಸ್ಥಿತರಿದ್ದರು.